                  ಇದು ಪ್ರೂಫ್  ರೀಡಿಂಗ್  ಆಗಬೇಕಾದ ಪುಟ ; ನಂತರ ಈ ಸಾಲನ್ನು ತೆಗೆದುಬಿಡಿ

ಕಲಿಲ : ಎರಡು ವಸ್ತುಗಳ ನಿಕಟ ಮಿಶ್ರಣ; ಇಲ್ಲಿ ಸೂಕ್ಷ್ಮವಿಭಜಿತ ಸ್ಥಿತಿಯಲ್ಲಿರುವ ಒಂದು ವಸ್ತು ಎರಡನೆಯ ವಸ್ತುವಿನ ಮೂಲಕ ಏಕರೀತಿಯಲ್ಲಿ ವಿತರಣೆಗೊಂಡಿರುವುದು. ಮೊದಲನೆಯ ವಸ್ತುವಿನ ಹೆಸರು ಚೆದರಿದ ಅವಸ್ಥೆ (ಡಿಸ್ಪಸ್ರ್ಡ್‌ ಫೇ಼ಸ್û) ಅಥವಾ ಕಲಿಲ (ಕಾಲಾಯ್ಡ್‌). ಎರಡನೆಯ ವಸ್ತುವಿನ ಹೆಸರು ವಿಲಂಬನ ಮಾಧ್ಯಮ (ಡಿಸ್ಪರ್ಷನ್ ಮೀಡಿಯಂ). ವಿಲಂಬನ ಮಾಧ್ಯಮ ಅನಿಲ, ದ್ರವ ಅಥವಾ ಘನ ಆಗಬಹುದು; ಚೆದರಿದ ಅವಸ್ಥೆ ಇವು ಯಾವುವೇ ಆಗಬಹುದಾದರೂ ಒಂದು ಅನಿಲದೊಡನೆ ಇನ್ನೊಂದು ಅನಿಲದ ಕಲಿಲ ವ್ಯವಸ್ಥೆಯನ್ನು ಪ್ರಸ್ತಾಪಿಸುವ ವಾಡಿಕೆ ಇಲ್ಲ. ಕಲಿಲ ಸ್ಥಿತಿಯನ್ನು ಇತ್ಯರ್ಥಮಾಡುವುದು ವಸ್ತುವಿನ ಕಣಗಾತ್ರಗಳಿಂದ; ಕಣ್ಣಿಗೆ ಕಾಣುವ ಜೋಲಾಡುತ್ತಿರುವ ಕಣಗಳಿಗೂ ಕಾಣದ ಅಣುಗಳಿಗೂ ಮಧ್ಯವರ್ತಿ ಗಾತ್ರಗಳಿವು, ೧೦-೧೦,೦೦೦ (Å).
ದ್ರವ ವ್ಯಾಪಕತ್ವದ ಬಗ್ಗೆ ಸಂಶೋಧನೆಯಲ್ಲಿ ನಿರತನಾಗಿದ್ದ ಥಾಮಸ್ ಗ್ರಹಮನಿಗೆ ಒಂದು ವಿನೂತನ ಅನುಭವವಾಯಿತು (೧೮೬೧). ಕೆಲವು ವಿಲೀನ ವಸ್ತುಗಳು ಪ್ರಾಣಿ ಮತ್ತು ಸಸ್ಯ ಸಂಬಂಧವಾದ ಪೊರೆಗಳ ಮೂಲಕ ಸರಾಗವಾಗಿ ಪಸರಿಸುತ್ತಿದ್ದವು. ಇನ್ನು ಕೆಲವು ವಸ್ತುಗಳು ಈ ತೆರನಾಗಿ ವರ್ತಿಸುತ್ತಿರಲಿಲ್ಲ. ಮೊದಲನೆಯ ವರ್ಗದ ಅನೇಕ ವಸ್ತುಗಳನ್ನು ಹರಳುರೂಪದಲ್ಲಿ ಪಡೆಯಬಹುದಾಗಿತ್ತು. ಆದ್ದರಿಂದ ಅವನ್ನು ಸ್ಫಟಿಕರೂಪಿಗಳು (ಕ್ಟಿಸ್ಟಲಾಯ್ಡ್‌್ಸ) ಎಂದು ಆತ ಕರೆದ. ಪೊರೆಯ ಮೂಲಕ ಪಸರಿಸಲು ಅಶಕ್ತವಾಗಿದ್ದ ವಸ್ತುಗಳನ್ನು ಕಾಲಾಯ್ಡ್‌್ಸ ಎಂದು ಹೆಸರಿಸಿದ. ಸಾಮಾನ್ಯ ಗೋಂದಿಗೆ ಈ ಗುಣವಿದ್ದುದರಿಂದ ಗ್ರೀಕ್ ಪದವಾದ ಕೊಲ್ಲಾ ಎಂದರೆ ಅಂಟು ಎಂಬುದನ್ನು ಆಧರಿಸಿ ಈ ಹೆಸರಿಡಲಾಯಿತು. ಕಾಲಾಯ್ಡ್‌ (ಕಲಿಲ) ವರ್ಗದ ವಸ್ತುಗಳಾದ ಪಿಷ್ಟ, ಜಿಲೆಟಿನ್, ಸಸಾರಜನಕಗಳು ಇತ್ಯಾದಿಗಳ ಅಣುತೂಕ ಅಗಾಧವಾಗಿರುವುದರಿಂದ ಆಸ್ಮಾಟಿಕ್ ಒತ್ತಡ ಕಡಿಮೆಯಾಗಿ ಅವು ವ್ಯಾಪಿಸಲು ಸಾಧ್ಯವಿಲ್ಲ. ಅಲ್ಲದೆ ಅವುಗಳ ಅಣು ಗಾತ್ರವೂ ಹೆಚ್ಚಾಗಿರುವುದರಿಂದ ಪಾರ್ಚ್ಮೆಂಟ್ ಮುಂತಾದ ಪೊರೆಗಳಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ ಅವು ಪಸರಿಸಲಾರವು ಎಂಬುದು ಗ್ರಹಮನ ವಾದವಾಗಿತ್ತು.

ಸ್ಫಟಿಕರೂಪಿಗಳು ಮತ್ತು ಕಲಿಲಗಳು ಎಂದು ವಸ್ತುಗಳನ್ನು ವಿಂಗಡಿಸಲು ಬಾರದು ಎಂಬುದಾಗಿ ಅನಂತರ ನಡೆಸಲಾದ ಸಂಶೋಧನೆಗಳಿಂದ ವ್ಯಕ್ತವಾಯಿತು. ಕಲಿಲ ವಸ್ತುಗಳು ಎಂಬುದೇ ಇಲ್ಲ. ಯಾವ ವಸ್ತುವನ್ನಾದರೂ ಕಲಿಲ ಸ್ಥಿತಿಗೆ ತರಲು ಸಾಧ್ಯ ಎಂದು ಪ್ರಯೋಗಗಳಿಂದ ಸಿದ್ಧವಾಗಿದೆ. ಉಪ್ಪನ್ನು ನೀರಿಗೆ ಹಾಕಿದಾಗ ದ್ರಾವಣವಾಗುವುದು. ಆದರೆ ಬೆಂಜಿûೕನ್ ದ್ರವದಲ್ಲಿ ಉಪ್ಪನ್ನು ಕಲಿಲ ಸ್ಥಿತಿಯಲ್ಲಿ ವಿಲಂಬಿಸಬಹುದು. ಸಾಬೂನನ್ನು ನೀರಿನಲ್ಲಿ ಕದಡಿದಾಗ ಬರುವುದು ಕಲಿಲದ್ರಾವಣ. ಅದೇ ಆಲ್ಕೊಹಾಲಿನಲ್ಲಿ ಅಣುಸ್ಥಿತಿಯಲ್ಲಿ ವಿಲೀನವಾಗಿ ನೈಜದ್ರಾವಣವೆನಿಸಿಕೊಳ್ಳುವುದು. ಅಲ್ಲದೆ ಅನೇಕ ಕಲಿಲ ವಸ್ತುಗಳನ್ನು ಹರಳು ರೂಪದಲ್ಲಿ ಪಡೆದಿರುವ ನಿದರ್ಶನಗಳಿವೆ. ಹೀಗಾಗಿ ಗ್ರಹಮನ ಮೂಲ ವರ್ಗೀಕರಣವನ್ನು ಇಂದು ಕೈಬಿಡಲಾಗಿದೆ.

ಉಪ್ಪನ್ನು ನೀರಿನಲ್ಲಿ ವಿಲೀನ ಮಾಡಿದಾಗ ಉಂಟಾಗುವ ದ್ರಾವಣ ಸಮಾಂಗಿಯಾಗಿ (ಹೊಮೊಜೀನಿಯಸ್) ತೋರುವುದು. ಅದರಲ್ಲಿರುವ ಕಣಗಳು ನಮಗೆ ಕಾಣಿಸದಷ್ಟು ಸಣ್ಣಗಿರುವುದೇ ಈ ಅನುಭವಕ್ಕೆ ಕಾರಣ. ವಿಲೀನ ವಸ್ತುವನ್ನು ಶೋಧಿಸಿ ನೀರಿನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಮರಳನ್ನು ನೀರಿನಲ್ಲಿ ಕದಡಿದಾಗ ಮಡ್ಡಿಯಂಥ ಮಿಶ್ರಣ ಏರ್ಪಡುವುದು. ಅದರಲ್ಲಿರುವ ಕಣಗಳನ್ನು ಬರಿಗಣ್ಣಿನಿಂದಾಗಲಿ ಸೂಕ್ಷ್ಮದರ್ಶಕದಿಂದಾಗಲಿ ನೋಡಬಹುದು. ಇಂಥ ಮಡ್ಡಿ ಮಿಶ್ರಣ ವಿಷಮಾಂಗಿಯಾಗಿ (ಹೆಟರೊಜೀನಿಯಸ್) ಕಾಣುವುದು ಸಹಜ. ಮರಳಿನಕಣಗಳು ದೊಡ್ಡವಾದ್ದರಿಂದ ಸ್ವಾಭಾವಿಕವಾಗಿಯೇ ಅವು ಕ್ರಮೇಣ ತಳವೂರುವುವು. ಇದರಲ್ಲಿರುವ ಚೆದರಿದ ವಸ್ತುವನ್ನು ಶೋಧಿಸಿ ಬೇರ್ಪಡಿಸಬಹುದು. ಇಂಥ ದೊಡ್ಡ ಕಣಗಳನ್ನು ವಿಭಜಿಸುತ್ತ ನಡೆದರೆ ಅಂತಿಮವಾಗಿ ಅವು ದ್ರಾವಣದಲ್ಲಿರುವ ಅಣುಗಳಾಗುತ್ತವೆ. ಈ ಪರಿವರ್ತನ ಕಾಲದ ಒಂದು ಹಂತದಲ್ಲಿ ದೊರೆಯುವ ನಡುವರ್ತಿ ಗಾತ್ರದ ಕಣಗಳಿಗೆ ದ್ರಾವಣ ಮತ್ತು ಮಡ್ಡಿಮಿಶ್ರಣದ ಕಣಗಳ ಗುಣಗಳೆರಡೂ ಪ್ರಾಪ್ತವಾಗಲೇಬೇಕು. ಈ ತ್ರಿಶಂಕು ಸ್ಥಿತಿಯಲ್ಲಿರುವ ವಸ್ತುವಿನ ಕಣಗಳು ಕಲಿಲಸ್ಥಿತಿಯಲ್ಲಿವೆ ಎನ್ನುವುದು ವಾಡಿಕೆ. ಕಣಗಾತ್ರಕ್ಕೆ ನಿಷ್ಕೃಷ್ಟ ಮಿತಿಗಳನ್ನು ಸೂಚಿಸುವುದು ಅಸಾಧು. ಸ್ಥೂಲವಾಗಿ ಕೆಳಕಂಡಂತೆ ವಿವರಿಸಬಹುದು :
 ಹೆಸರು 		ಕಣಗಾತ್ರ
 ಒರಟು ಮಡ್ಡಿ 	. . . 	೫೦,೦೦೦ ಮಿಲಿಮೈಕ್ರಾನುಗಳಿಗಿಂತ ಹೆಚ್ಚು
 ನಯಮಡ್ಡಿ 	. . . 	೧೦೦-೫೦,೦೦೦ ಮಿಲಿಮೈಕ್ರಾನುಗಳು
 ಕಲಿಲ ವಸ್ತುಸ್ಥಿತಿ 	. . . 	೧-೧೦೦ ಮಿಲಿಮೈಕ್ರಾನುಗಳು
 ನೈಜದ್ರಾವಣ 	. . . 	೧ ಮಿಲಿಮೈಕ್ರಾನಿಗಿಂತ ಕಡಿಮೆ
(೧ ಮಿಲಿಮೈಕ್ರಾನು = ೧೦-೭ ಸೆಂಮೀ)

ಬರಿಗಣ್ಣಿಗೆ ಕಲಿಲ ಕಣಗಳು ಕಾಣಿಸುವುದಿಲ್ಲ. ಆದ್ದರಿಂದ ಕಲಿಲ ದ್ರಾವಣ ಸಮಾಂಗಿಯಾಗಿ ತೋರುವುದು ಸ್ವಾಭಾವಿಕ. ಆದರೆ ಸಾಮಾನ್ಯ ಸೂಕ್ಷ್ಮದರ್ಶಿಯಿಂದ ವಿಶೇಷ ಭಂಗಿಯಲ್ಲಿ ವೀಕ್ಷಿಸಿದಾಗ ದ್ರಾವಣದ ಭಿನ್ನಗುಣ ವ್ಯಕ್ತವಾಗುವುದು. ಇಂಥ ಕಣಗಳು ತಳವೂರುವುದಿಲ್ಲ. ಅವನ್ನು ಶೋಧಿಸಿ ಬೇರ್ಪಡಿಸುವಂತಿಲ್ಲ. ಕೇಂದ್ರಾಪಗಮನ ಯಂತ್ರದಲ್ಲಿ ಹಾಕಿ ಕುಲುಕಿದಾಗ ಮಾತ್ರ ಅವು ತಳವೂರುವುವು. ಅತಿಸೂಕ್ಷ್ಮ ರಂಧ್ರಗಳಿರುವ ಸೋಸುಕಾಗದಗಳನ್ನು ಬಳಸಿ ಅವನ್ನು ಬೇರ್ಪಡಿಸಬಹುದು.

ಕಲಿಲ ವಸ್ತುಸ್ಥಿತಿಯ ಮತ್ತೊಂದು ವೈಶಿಷ್ಟ್ಯ ಆ ಸ್ಥಿತಿಯಲ್ಲಿರುವ ವಸ್ತುವಿನ ಅಪಾರ ಮೇಲ್ಮೈ ವಿಸ್ತೀರ್ಣ. ೧ ಘ. ಸೆಂಮೀ. ವಸ್ತುವಿನ ಮೇಲ್ಮೈ ವಿಸ್ತೀರ್ಣ ೬ ಚದರ ಸೆಂಮೀ. ಅದೇ ವಸ್ತುವನ್ನು ಒಂದು ಮಿಲಿಮೈಕ್ರಾನ್ ಉದ್ದದ ಬಾಹುಗಳುಳ್ಳ ಫನಾಕೃತಿಗಳಾಗಿ ವಿಭಾಗಿಸಿದರೆ ಲಭ್ಯ ವಸ್ತುವಿನ ಒಟ್ಟು ಮೇಲ್ಮೈ ವಿಸ್ತೀರ್ಣ ೬,೦೦೦ ಚದರ ಸೆಂಮೀ. ಅಂದರೆ ಸುಮಾರು ಒಂದೂವರೆ ಎಕರೆ ಪ್ರದೇಶದಷ್ಟು. ಇದರಿಂದ ಕಲಿಲ ವಸ್ತುಸ್ಥಿತಿಯ ಕಲ್ಪನೆ ಉಂಟಾದೀತು.
ಪ್ರತಿಯೊಂದು ಕಲಿಲದಲ್ಲೂ ಈ ಹಿಂದೆ ಹೇಳಿದಂತೆ ಎರಡು ಭಾಗಗಳಿವೆ. ಒಂದು ಚೆದರಿದ ವಸ್ತು ಮತ್ತೊಂದು ಚೆದರಿದ ಮಾಧ್ಯಮ. ಈ ಅಂಗಭಾಗಗಳು ಅನಿಲ, ದ್ರವ ಅಥವಾ ಘನರೂಪದಲ್ಲಿರಬಹುದು. ತತ್ಫಲವಾಗಿ ಕೆಳಕಂಡ ಎಂಟು ವಿಧವಾದ ಕಲಿಲಗಳಿರಲು ಸಾಧ್ಯ. ಎರಡು ಅನಿಲಗಳು ಸಂಪೂರ್ಣವಾಗಿ ಬೆರೆಯುವುದರಿಂದ ಆ ಮಿಶ್ರಣ ನೈಜದ್ರಾವಣವಾಗುವುದು. ಆದ್ದರಿಂದ ಎರಡು ಅನಿಲಗಳು ಕೂಡಿ ಕಲಿಲದ್ರಾವಣವನ್ನು ಕೊಡಲಾರವು.
	ವಿಲಂಬಿತ 	ಚೆದರಿದ	ಕಲಿಲದ	ಪರಿಚಿತ ಉದಾಹರಣೆ
	ವಸ್ತುಸ್ಥಿತಿ 	ಮಾಧ್ಯಮ 	ಹೆಸರು 
೧ 	ಘನ 	ಘನ	ಘನ ಸಾಲ್	ಖನಿಜಗಳು, ರತ್ನಗಳು
೨ 	ಘನ 	ದ್ರವ 	ಸಾಲ್ 	ಚಿನ್ನದ ಸಾಲ್, ಮಣ್ಣು
 				ಗೂಡಿದ ನೀರು
೩ 	ಘನ 	ಅನಿಲ 	ಏರೊಸಾಲ್	ಹೊಗೆ (ಗಾಳಿಯಲ್ಲಿ 						ಚೆದರಿದ ಇಂಗಾಲ)
೪ 	ದ್ರವ 	ಘನ 	ಜಲ್	ಮೊಸರು
				ಕ್ಷೀರ ಸ್ಫಟಿಕ (ಓಪಲ್)
				(ಸಿಲಿಕಾದಲ್ಲಿ 
				ಚೆದರಿದ ನೀರು)
೫ 	ದ್ರವ 	ದ್ರವ 	ಎಮಲ್ಷನ್	ಹಾಲು
				(ನೀರಿನಲ್ಲಿ 
				ಚೆದರಿದ ಕೊಬ್ಬು)
೬ 	ದ್ರವ 	ಅನಿಲ 	ಏರೊಸಾಲ್ 	ಮೋಡ (ಗಾಳಿಯಲ್ಲಿ 						ಚೆದರಿದ ನೀರು)
೭ 	ಅನಿಲ 	ಘನ 	ಘನ ನೊರೆ 	ಸಮುದ್ರದ ನೊರೆ
				ಪ್ಯುಮಿಸ್ ಶಿಲೆ 
				(ಸಿಲಿಕೇಟುಗಳಲ್ಲಿ
				ಚೆದರಿದ ಗಾಳಿ)
೮ 	ಅನಿಲ 	ದ್ರವ 	ನೊರೆ 	ಬುರುಗು (ನೀರಿನಲ್ಲಿ 						ಚೆದರಿದ ಗಾಳಿ)
ಆಧುನಿಕ ವರ್ಗೀಕರಣ ಬೇರೆಯಾಗಿದೆ. ಅದರ ಪ್ರಕಾರ ಮೂರು ನಮೂನೆಯ ಕಲಿಲಗಳನ್ನು ಪಡೆಯಲು ಸಾಧ್ಯ.
(ಚಿ) ಚೆದರಿದ (ಡಿಸ್ಪರ್ಷನ್) ಕಲಿಲಗಳು : ವಸ್ತುರಾಶಿಯನ್ನು ಸೂಕ್ತ ವಿಧಾನದಿಂದ ಒಡೆದು ಕಲಿಲ ಸ್ಥಿತಿಗೆ ತರಬಹುದು. ಆಗ ಪ್ರತಿಯೊಂದು ವಿಲಂಬಿತ ಕಣದಲ್ಲೂ ಸಹಸ್ರಾರು ಅಣುಗಳು ಗೊಂಚಲುಗೂಡಿರುತ್ತವೆ. ಬಹುಪಾಲು ಇನ್ಆಗಾರ್ಯ್‌ನಿಕ್ ಕಲಿಲಗಳು ಈ ಜಾತಿಯವು. ಉದಾಹರಣೆಗೆ ಚಿನ್ನ, ಫೆರಿಕ್ ಹೈಡ್ರಾಕ್ಸೈಡ್, ಸಿಲಿಸಿಕಾಮ್ಲ ಇತ್ಯಾದಿ.
(b) ಸಂಘಟಿತ (ಅಸೋಸಿಯೇಟೆಡ್) ಕಲಿಲಗಳು : ಕೆಲವು ವಸ್ತುಗಳನ್ನು ನೀರಿನಲ್ಲಿ ವಿಲೀನ ಮಾಡಿದಾಗ ಸಹಜವಾಗಿಯೇ ಅದರಲ್ಲಿರುವ ಅಣುಗಳು ಅಥವಾ ಅಯಾನುಗಳು ಕಲಿಲ ಕಣಗಳಾಗುವುವು. ಇವಕ್ಕೆ ಮಿಸೆಲ್ ಎಂದು ಹೆಸರು. ಮಾಧ್ಯಮದಲ್ಲಿರುವ ಇತರ ಒಂಟಿ ಅಯಾನುಗಳ ಅಥವಾ ಅಣುಗಳ ಮತ್ತು ಈ ಮಿಸೆಲುಗಳ ನಡುವೆ ನಿರಂತರ ವಿನಿಮಯ ನಡೆಯುತ್ತಿದ್ದು ಸಮಸ್ಥಿತಿ ಏರ್ಪಟ್ಟಿರುತ್ತದೆ. ಬಣ್ಣಗಳು, ಮಾರ್ಜಕಗಳು ಮತ್ತು ಸಾಬೂನು ಈ ಗುಂಪಿಗೆ ಸೇರಿದ ಕಲಿಲಗಳು.
(ಛಿ) ಅಣು ಕಲಿಲಗಳು (ಮಾಲಿಕ್ಯುಲರ್ ಕಾಲಾಯ್ಡ್‌್ಸ) : ಈ ವಸ್ತುಗಳ ಅಣುಗಳೇ ಸ್ವಯಂ ಕಲಿಲ ಗಾತ್ರದವು. ಅವು ಮಾಧ್ಯಮದ ಸಂಪರ್ಕಕ್ಕೆ ಬಂದ ಕ್ಷಣ ಕಲಿಲಗಳಾಗಿಬಿಡುವುವು. ಆಲ್ಬುಮಿನ್, ಜಿಲೆಟಿನ್ ಮೊದಲಾದ ಸಸಾರಜನಕಗಳು, ಪಿಷ್ಟ ಮತ್ತು ಗೋಂದು ಇದಕ್ಕೆ ಉತ್ತಮ ಉದಾಹರಣೆಗಳು.
ಮಾಧ್ಯಮಕ್ಕೂ ಚೆದರಿದ ವಸ್ತುವಿಗೂ ಇರಬಹುದಾದ ಒಲವಿನ ಆಧಾರದ ಮೇಲೂ ಕಲಿಲಗಳನ್ನು ವಿಂಗಡಿಸುವ ಪರಿಪಾಠವಿದೆ. ಮಾಧ್ಯಮವನ್ನು ಪ್ರೀತಿಸುವ ಕಲಿಲಗಳನ್ನು ಲೀನಕಾರಿಅಭಿಮಾನಿಗಳೆಂದೂ (ಲಯೊಫಿಲಿಕ್) ಉಳಿದವನ್ನು ಲೀನಕಾರಿದ್ವೇಷಿಗಳೆಂದೂ ವಿಭಾಗಿಸುವರು. ಸಾಮಾನ್ಯವಾಗಿ ಮಾಧ್ಯಮ ನೀರಾಗಿರುವ ಸಂದರ್ಭಗಳೇ ಹೆಚ್ಚು. ಹೀಗಾಗಿ ಜಲಾಭಿಮಾನಿ ಮತ್ತು ಜಲದ್ವೇಷಿ ಕಲಿಲಗಳೆಂಬ ವರ್ಗನಾಮಗಳೂ ಬಳಕೆಯಲ್ಲಿವೆ. ಈ ಎರಡು ಜಾತಿಯ ಕಲಿಲಗಳ ಗುಣಲಕ್ಷಣಗಳನ್ನು ಮುಂದೆ ವಿವೇಚಿಸಲಾಗುವುದು.
ಕಲಿಲ ದ್ರಾವಣಗಳನ್ನು ತಯಾರಿಸುವ ಬಗೆ : ಅಣುಸ್ಥಿತಿಗೂ ದೃಗ್ಗೋಚರ ವಸ್ತುಸ್ಥಿತಿಗೂ ನಡುವರ್ತಿ ಸ್ಥಿತಿ ಕಲಿಲವಾದ್ದರಿಂದ ಅಣುಗಳನ್ನು ಕಲೆಹಾಕಿಯಾಗಲೀ ವಸ್ತುರಾಶಿಯನ್ನು ವಿಭಜಿಸಿಯಾಗಲೀ ಕಲಿಲ ಗಾತ್ರವನ್ನು ತಲುಪಬಹುದು. ಮೊದಲನೆಯದು ಸಂಘಟನ ವಿಧಾನವೆನಿಸಿಕೊಂಡರೆ ಎರಡನೆಯದನ್ನು ವಿಭಜನ ವಿಧಾನವೆನ್ನಬಹುದು. ಈ ಎರಡು ರೀತಿಯ ತಯಾರಿಕಾತಂತ್ರಗಳೂ ರೂಢಿಯಲ್ಲಿವೆ.
ಸಂಘಟನ ವಿಧಾನಗಳು : ೧ ಪರಸ್ಪರ ಪಲ್ಲಟನೆ: ಆರ್ಸೆನಿಕ್ ಟ್ರೈಸಲ್ಫೈಡ್ ಸಾಲ್ ತಯಾರಿಸುವುದು ಹೀಗೆಯೇ. ಅರ್ಧ ಗ್ರಾಂನಷ್ಟು ನುಣ್ಣಗೆ ಪುಡಿ ಮಾಡಿದ ಆರ್ಸೆನಿಯಸ್ ಅಕ್ಸೈಡನ್ನು (ಂs೨o೩) ಅರ್ಧ ಲೀಟರ್ ಬಟ್ಟಿ ಇಳಿಸಿದ ನೀರಿಗೆ ಸೇರಿಸಿ ಅದು ಲೀನವಾಗುವ ತನಕ ಕುದಿಸಬೇಕು. ಅನಂತರ ದ್ರಾವಣವನ್ನು ತಣಿಸಿ ಅದರ ಮೂಲಕ ಆಮ್ಲದ ತುಂತುರುಗಳಿಲ್ಲದ ಪರಿಶುದ್ಧವಾದ ಹೈಡ್ರೊಜನ್ ಸಲ್ಫೈಡನ್ನು ದಟ್ಟಹಳದಿ ಬಣ್ಣ ಉಂಟಾಗುವವರೆಗೂ ಹಾಯಿಸಬೇಕು. ಈಗ ಅರ್ಧ ತಾಸಿನವರೆಗೆ ಶುದ್ಧವಾದ ಹೈಡ್ರೊಜನ್ ಅಥವಾ ಇಂಗಾಲದ ಡೈಆಕ್ಸೈಡನ್ನು ಹಾಯಿಸಿದರೆ ದ್ರಾವಣದಲ್ಲಿ ಅಡಗಿರಬಹುದಾದ ಹೆಚ್ಚುವರಿ ಹೈಡ್ರೊಜನ್ ಸಲ್ಫೈಡ್ ಹೊರದೂಡಲ್ಪಡುತ್ತದೆ. ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ಮುಂದಿನ ಸಮೀಕರಣ ಸೂಚಿಸುತ್ತದೆ :

ಆಮೇಲೆ ಶೋಧಿಸಿದರೆ ಬರುವ ಶೋಧಿತ ದ್ರವವೇ ಆರ್ಸೆನಿಕ್ ಟ್ರೈಸಲ್ಫೈಡ್ ಸಾಲ್. ಇದೇ ರೀತಿ ಪ್ರಷ್ಯನ್ ನೀಲಿ ಕಲಿಲ ದ್ರಾವಣವನ್ನು ಮಾಡಿಕೊಳ್ಳಬಹುದು. ಫೆರಿಕ್ ಕ್ಲೋರೈಡ್ ಮತ್ತು ಪೊಟಾಸಿಯಂ ಫೆರೊಸಯನೈಡುಗಳ ಬಲು ದುರ್ಬಲ ದ್ರಾವಣಗಳನ್ನು ಮಿಶ್ರಮಾಡುವುದರಿಂದ ಇದು ಲಭಿಸುತ್ತದೆ.

                    ಪ್ರಷ್ಯನ್ ನೀಲಿ
೨. ಜಲವಿಶ್ಲೇಷಣೆ : ೧೨ ಮಿಲಿಲೀಟರಿನಷ್ಟು ಶೇ.೩೨ ಫೆರಿಕ್ ಕ್ಲೋರೈಡಿನ ದ್ರಾವಣವನ್ನು ಮುಕ್ಕಾಲು ಲೀಟರು ಕುದಿಯುವ ನೀರಿಗೆ ತೊಟ್ಟು ತೊಟ್ಟಾಗಿ ಸೇರಿಸಿದಾಗ ಸೊಗಸಾದ ಕೆಂಪುಬಣ್ಣದ ಫೆರಿಕ್ ಹೈಡ್ರಾಕ್ಸೈಡ್ ಸಾಲ್ ಬರುವುದು.

ಸೋಡಿಯಂ ಸಿಲಿಕೇಟನ್ನು ಜಲವಿಶ್ಲೇಷಿಸಿ ಸಿಲಿಸಿಕಾಮ್ಲದ ಸಾಲ್ ತಯಾರಿಸಬಹುದು. ಮಾರುಕಟ್ಟೆಯಲ್ಲಿ ದೊರೆಯುವ ನೀರ್ಗಾಜಿಗೆ (ವಾಟರ್ ಗ್ಲಾಸ್) ನೀರು ಬೆರೆಸಿ ೧.೧೪ ಸಾಪೇಕ್ಷಸಾಂದ್ರತೆಯುಳ್ಳ ದ್ರವಮಾಡಿಕೊಳ್ಳಬೇಕು. ಇದಕ್ಕೆ ೪(ಓ)-ಪ್ರಬಲತೆಯ ಹೈಡ್ರೊಕ್ಲೋರಿಕ್ ಆಮ್ಲವನ್ನು ಸತತವೂ ಕಲಕುತ್ತ ಸೇರಿಸಬೇಕು. ಹೆಚ್ಚುವರಿ ಆಮ್ಲ ಉಳಿಯುವ ತನಕ ಹೀಗೆ ಮಾಡಿದರೆ ಸಿಲಿಸಿಕಾಮ್ಲದ ಸಾಲ್ ದೊರೆಯುವುದು.

ಕಲಿಲವನ್ನು ಶುದ್ಧಿಮಾಡುವ ಮುನ್ನ ನೀರು ಸೇರಿಸಿ ದ್ರಾವಣದ ಗಾತ್ರವನ್ನು ಎರಡು ಪಟ್ಟು ಹೆಚ್ಚಿಸುವುದು ಉತ್ತಮ.
೩ ಅಪಕರ್ಷಣ : ಚಿನ್ನ, ಬೆಳ್ಳಿ, ಪ್ಲ್ಯಾಟಿನಂ, ಸೀಸ ಮೊದಲಾದ ಲೋಹ ಲವಣಗಳ ದುರ್ಬಲ ದ್ರಾವಣಗಳನ್ನು ಫಾರ್ಮಾಲ್ಡಿಹೈಡ್, ಟ್ಯಾನಿಕ್ ಆಮ್ಲ ಇತ್ಯಾದಿ ಆಗಾರ್ಯ್‌ನಿಕ್ ವಸ್ತುಗಳಿಂದ ಅಪಕರ್ಷಿಸಿದಾಗ ಆಯಾ ಲೋಹದ ಸಾಲ್ಗಳು ದೊರೆಯುತ್ತವೆ. ಸಿಲ್ವರ್ ನೈಟ್ರೇಟಿನ ಅಮೋನಿಯಾ ದ್ರಾವಣವನ್ನು ಟ್ಯಾನಿಕ್ ಆಮ್ಲದಿಂದ ಅಪಕರ್ಷಿಸಿ ಬೆಳ್ಳಿಯ ಸಾಲ್ ಪಡೆಯಬಹುದು. ಚಿನ್ನದ ಕೆಂಪು ಕಲಿಲ ದ್ರಾವಣ ತಯಾರಿಸುವ ಜಿಗ್ಮಾಂಡಿ ವಿಧಾನ ಇಂತಿದೆ. ೩ ಮಿಲಿಗ್ರಾಂ ಚಿನ್ನದ ಕ್ಲೋರೈಡ್ ) ಮತ್ತು ೭.೪ ಮಿಲಿಗ್ರಾಂ ಪೊಟಾಸಿಯಂ ಕಾರ್ಬೊನೇಟನ್ನು ಬಟ್ಟಿ ಇಳಿಸಿದ ೨೫ ಮಿಲಿಲೀಟರ್ ನೀರಿನಲ್ಲಿ ವಿಲೀನಮಾಡಬೇಕು. ಬಿಳಿಯ ರಂಜಕವನ್ನು ಈಥರಿನಲ್ಲಿ ವಿಲೀನಗೊಳಿಸಿ ಅದರ ದುರ್ಬಲ ದ್ರಾವಣವನ್ನು ತೊಟ್ಟು ತೊಟ್ಟಾಗಿ ದಟ್ಟವಾದ ಕೆಂಪು ಬಣ್ಣ ಪ್ರಾಪ್ತವಾಗುವವರೆಗೂ ಸೇರಿಸುತ್ತ ಬರಬೇಕು. ಅದೇ ಚಿನ್ನದ ಕಲಿಲ. ಇದಕ್ಕೆ ಉಪ್ಪಿನ ದುರ್ಬಲ ದ್ರಾವಣವನ್ನು ತೊಟ್ಟುತೊಟ್ಟಾಗಿ ಸೇರಿಸುತ್ತ ಬಂದರೆ ನೀಲಿ ಕಲಿಲ ಆಗುವುದು. ಬಣ್ಣ ಬದಲಾವಣೆಗೆ ಕಣಗಳ ಗಾತ್ರವರ್ಧನೆಯೇ ಕಾರಣ.
೪. ಉತ್ಕರ್ಷಣ : ಶುದ್ಧ ಹೈಡ್ರೊಜನ್ ಸಲ್ಫೈಡನ್ನು ಬ್ರೋಮಿನ್ ದ್ರಾವಣ, ನೈಟ್ರಿಕಾಮ್ಲ, ಸಲ್ಫ್ಯೂರಸಾಮ್ಲ ಮುಂತಾದ ಉತ್ಕರ್ಷಣಕಾರಿಗಳ ಮೂಲಕ ಹಾಯಿಸಿದರೆ ಗಂಧಕದ ಬಿಳಿಯ ಕಲಿಲ ಉಂಟಾಗುವುದು.

೫. ಲೀನಕಾರಿ ವಿನಿಮಯ : ಗಂಧಕ ಮತ್ತು ರಂಜಕಗಳು ಆಲ್ಕೊಹಾಲಿನಲ್ಲಿ ದ್ರಾವ್ಯ. ಈ ವಸ್ತುಗಳ ಆಲ್ಕೊಹಾಲಿನ ದ್ರಾವಣವನ್ನು ನೀರಿಗೆ ಬೆರೆಸಿದಾಗ ಕೂಡಲೇ ಅವು ಕಲಿಲಸ್ಥಿತಿ ಮುಟ್ಟುವುವು.
೬. ಭೌತ ಸ್ಥಿತ್ಯಂತರ : ಪಾದರಸ, ಗಂಧಕ ಇತ್ಯಾದಿ ಮೂಲ ವಸ್ತುಗಳ ಆವಿಯನ್ನು ಅಮೋನಿಯಂ ಲವಣ ಅಥವಾ ಒಂದು ಸಿಟ್ರೇಟ್ ಉಳ್ಳ ತಣ್ಣೀರಿನ ಮೂಲಕ ಹಾಯಿಸಿದರೆ ಕೂಡಲೇ ಆಯಾ ಮೂಲವಸ್ತುಗಳ ಕಲಿಲಗಳು ಉಂಟಾಗುತ್ತವೆ.
ವಿಭಜನ ವಿಧಾನಗಳು. ೧ ಯಾಂತ್ರಿಕ ವಿಭಜನೆ: ಚೆದರಿಸಬೇಕಾದ ವಸ್ತುವನ್ನು ಸಾಧ್ಯವಾದಷ್ಟು ನಯವಾಗಿ ಹುಡಿಮಾಡಿ ಅಪೇಕ್ಷಿತ ದ್ರವಮಾಧ್ಯಮದೊಡನೆ ಕದಡಲಾಗುವುದು. ಆಗ ಒರಟು ಮಡ್ಡಿಯುಂಟಾಗುವುದು. ಇದನ್ನು ಕಲಿಲ ಗಿರಣಿಯಲ್ಲಿ ಅರೆಯುವುದು ಮುಂದಿನ ಹಂತ. ಬಳಕೆಯಲ್ಲಿರುವ ಗಿರಣಿಗಳ ಪೈಕಿ ಸರಳ ರಚನೆಯದೆಂದರೆ ತಟ್ಟೆಗಿರಣಿ. ಅದನ್ನು ಚಿತ್ರ ೧ ರಲ್ಲಿ ಕಾಣಬಹುದು. ಎರಡು ಉಕ್ಕಿನ ತಟ್ಟೆಗಳು ಪರಸ್ಪರ ಹೊಂದಿಕೊಂಡಂತಿದ್ದು ಅವುಗಳ ನಡುವೆ ಕೊಂಚ ಅಂತರವಿರುವುದು. ಎರಡು ತಟ್ಟೆಗಳೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬಹುವೇಗವಾಗಿ ಅಂದರೆ ಒಂದು ಮಿನಿಟಿಗೆ ಸುಮಾರು ೭,೦೦೦ ಸಾರಿ ಸುತ್ತುತ್ತಿರುವುವು. ಇವುಗಳ ನಡುವೆ ಸಿಕ್ಕಿಬಿದ್ದ ಒರಟು ಮಡ್ಡಿ ಚೆನ್ನಾಗಿ ಅರೆಯಲ್ಪಟ್ಟು ಕಲಿಲ ಗಾತ್ರ ತಲುಪಿ ಪಕ್ಕದಲ್ಲೇ ಹೊರ ಬೀಳುವುದು. ಅರ್ಯಾಬಿಕ್ ಗೋಂದನ್ನು ದೀಪದ ಮಸಿಯೊಡನೆ ನೀರಿನಲ್ಲಿ ಈ ರೀತಿ ಅರೆದು ಇಂಡಿಯನ್ ಶಾಯಿಯನ್ನು ತಯಾರಿಸುತ್ತಾರೆ. ಗ್ರಾಫೈಟನ್ನು ಟ್ಯಾನಿನ್ ಜೊತೆ ನೀರಿನಲ್ಲಿ ಹೀಗೆ ಅರೆದರೆ ಅಕ್ವಾಡ್ಯಾಗ್ ಎಂಬ ಕೀಲೆಣ್ಣೆಯುಂಟಾಗುವುದು.
೨ ವಿದ್ಯುದ್ವಿಭಜನೆ : ಇದಕ್ಕೆ ಬ್ರೆಡಿಗ್ ವಿಧಾನವೆಂದು ಹೆಸರು. ಯಾವ ಲೋಹವನ್ನು ಕಲಿಲಸ್ಥಿತಿಗೆ ತರಬೇಕೋ ಅದನ್ನು ಎರಡು ಧ್ರುವಗಳಾಗಿ ಮಾಡಿ ಅವುಗಳ ನಡುವೆ ದ್ರವಮಾಧ್ಯಮದ ಅಡಿಯಲ್ಲಿ (ಸಾಮಾನ್ಯವಾಗಿ ನೀರು) ಪ್ರಬಲ ವಿದ್ಯುತ್ಕಿಡಿ ಹಾಯಿಸಲಾಗುವುದು. ಆಗ ಹುಟ್ಟುವ ಅಗಾಧ ಉಷ್ಣ ಲೋಹವನ್ನು ಆವಿಯಾಗಿಸುವುದು. ಸುತ್ತಲೂ ಇಟ್ಟಿರುವ ಮಂಜುಗೆಡ್ಡೆ ಇದನ್ನು ಕೂಡಲೇ ತಣಿಸಿ ಕಲಿಲಸ್ಥಿತಿಗೆ ಒಯ್ಯುವುದು.
ಮಾಧ್ಯಮಕ್ಕೆ ಕೊಂಚ ಪೊಟಾಸಿಯಂ ಹೈಡ್ರಾಕ್ಸೈಡ್ ಸೇರಿಸಿದರೆ ಕಲಿಲಕ್ಕೆ ರಕ್ಷಣೆ ಒದಗುವುದು. ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ತಾಮ್ರದ ಕಲಿಲಗಳನ್ನು ಹೀಗೆ ಪಡೆಯಬಹುದು. ವಿಲಂಬನ ಮಾಧ್ಯಮವೇನಾದರೂ ಆಗಾರ್ಯ್‌ನಿಕ್ ದ್ರವವಾಗಿದ್ದರೆ ವಿಪರೀತ ಮಸಿಗೂಡುವುದರಿಂದ ಈ ವಿಧಾನ ಅಸಮರ್ಪಕ. ಸುಧಾರಿತ ಸ್ಪೆಡ್ಬರ್ಗ್ ವಿಧಾನದಲ್ಲಿ ಪರ್ಯಾಯ ವಿದ್ಯುತ್ತನ್ನು ಬಳಸುವುದರಿಂದ ಹೀಗಾಗುವುದಿಲ್ಲ. ತಾಮ್ರದ ಕಲಿಲವನ್ನು ತಯಾರಿಸಲು ಈ ವಿಧಾನ ಬಲು ಅನುಕೂಲ. ತಾತ್ತ್ವಿಕವಾಗಿ ಇದನ್ನು ಪರಮಾಣು ಸಂಘಟನೆಯೆನ್ನಬಹುದು. ಧ್ರುವಗಳಿಂದ ಆವಿಯಾದ ಲೋಹದ ಪರಮಾಣುಗಳು ಕಲೆತು ಕಲಿಲ ಕಣಗಳಾಗುವುದರಿಂದ ಇದೂ ಒಂದು ಸಂಘಟನ ವಿಧಾನವೇ. ಆದರೆ ನಾವು ವಸ್ತುರಾಶಿಯಿಂದ ಪ್ರಾರಂಭಿಸಿ ಕಲಿಲ ಮಾಡಿಕೊಂಡಿರುವುದರಿಂದ ವಿಭಜನೆಯಾದಂತೆ ಭಾವಿಸಬಹುದು.
೩. ಪೆಪ್ಟೈಸೇಷನ್ : ಆಗ ತಾನೆ ಒತ್ತರಿಸಿದ ವಸ್ತುವನ್ನು, ಸೂಕ್ತ ಎಲೆಕ್ಟ್ರೊಲೈಟುಗಳನ್ನು ಸೇರಿಸುವುದರಿಂದ, ಪುನಃ ಕಲಿಲಸ್ಥಿತಿಗೆ ತರುವ ಕ್ರಮವಿದು. ಎಲೆಕ್ಟ್ರೊಲೈಟು ಒದಗಿಸಿದ ಅಯಾನುಗಳು, ಒತ್ತರಿಸಿದ ವಸ್ತುವಿನಲ್ಲಿರುವ ಸೂಕ್ಷ್ಮಕಣಗಳ ಮೇಲೆ, ಸಂಗ್ರಹಿಸುವುದರಿಂದ ಅವುಗಳ ಎಲ್ಲೆವಿಭವ (ಬೌಂಡರಿ ಪೊಟೆನ್ಷಿಯಲ್) ಹೆಚ್ಚಿ ಕಲಿಲಗಳಾಗುವುವು. ಉದಾಹರಣೆಗೆ ಚೆನ್ನಾಗಿ ತೊಳೆದ ಫೆರಿಕ್ ಹೈಡ್ರಾಕ್ಸೈಡ್ ಒತ್ತಡವನ್ನು ಫೆರಿಕ್ ಕ್ಲೋರೈಡ್ ದ್ರಾವಣದಲ್ಲಿರುವ ಫೆರಿಕ್ ಅಯಾನುಗಳು ಪೆಪ್ಟೈಸ್ ಮಾಡಬಲ್ಲವು.

ಪ್ರಷ್ಯನ್ ನೀಲಿ ಒತ್ತರಕ್ಕೆ ಆಕ್ಸಾಲಿಕ್ ಆಮ್ಲವನ್ನು ಸೇರಿಸಿ ಅದನ್ನು ಕಲಿಲಸ್ಥಿತಿಗೆ ತರಬಹುದು.
ಕಲಿಲಗಳ ಶುದ್ಧೀಕರಣ : ರಾಸಾಯನಿಕ ವಿಧಾನಗಳಿಂದ ತಯಾರಿಸಿದ ಕಲಿಲಗಳಲ್ಲಿ ಅಧಿಕಪ್ರಮಾಣದಲ್ಲಿ ಎಲೆಕ್ಟ್ರೋಲೈಟುಗಳು ಉಳಿದುಬಿಡುವುದು ಅನಿವಾರ್ಯವಾಗುತ್ತದೆ. ಕಲಿಲಸ್ಥಿತಿ ಮುಂದುವರಿಯಲು ಸ್ವಲ್ಪ ಎಲೆಕ್ಟ್ರೊಲೈಟ್ ಅಗತ್ಯವೆಂಬುದು ನಿಜ. ಆದರೆ ಹೆಚ್ಚುವರಿಯಾದ ಎಲೆಕ್ಟ್ರೊಲೈಟನ್ನು ಮಾಧ್ಯಮದಿಂದ ಹೊರಹಾಕದಿದ್ದರೆ ಕಲಿಲ ಒತ್ತರಿಸುವುದು ಖಂಡಿತ. ಆದ್ದರಿಂದ ಕಲಿಲ ದ್ರಾವಣದಲ್ಲಿರುವ ಎಲೆಕ್ಟ್ರೊಲೈಟಿನ ಪ್ರಾಬಲ್ಯವನ್ನು ಅಪೇಕ್ಷಿತ ಮಟ್ಟಕ್ಕೆ ಇಳಿಸಲು ಮೂರು ಮಾರ್ಗಗಳಿವೆ. ಮೊದಲನೆಯ ವಿಧಾನಕ್ಕೆ ಡಯಾಲಿಸಿಸ್ ಎಂದು ಹೆಸರು.
ಚಿತ್ರದಲ್ಲಿ ತೋರಿಸಿರುವಂತೆ ಅಶುದ್ಧ ಕಲಿಲ ದ್ರಾವಣವನ್ನು ಒಂದು ಪಾರ್ಚ್ಮೆಂಟ್ ಅಥವಾ ಸೆಲೊಫೇನ್ ಚೀಲದಲ್ಲಿ ಹಾಕಿ ನೀರು ಹರಿಯುತ್ತಿರುವ ತೊಟ್ಟಿಯೊಂದರಲ್ಲಿ ಇಡಲಾಗುವುದು. ಎಲೆಕ್ಟ್ರೊಲೈಟಿನ ಅಯಾನುಗಳೂ ಅಣುಗಳೂ ಅರೆಪಾರಗಮ್ಯ (ಸೆಮಿಪರ್ಮಿಯೆಬಲ್) ಪೊರೆಯ ರಂಧ್ರಗಳ ಮೂಲಕ ಹಾದು ಹೊರಬರುವುವು. ಬಂದೊಡನೆ ಅವು ನೀರಿನೊಡನೆ ಕೊಚ್ಚಿ ಹೋಗುವುವು. ದೊಡ್ಡದಾದ ಕಲಿಲ ಕಣಗಳು ಚೀಲದಲ್ಲೇ ಉಳಿಯುವುವು. ಬಿಸಿನೀರನ್ನು ಬಳಸಿ ಎಲೆಕ್ಟ್ರೊಲೈಟಿನ ನಿರ್ಗಮನವನ್ನು ತ್ವರೆಗೊಳಿಸಬಹುದು. ಮಿದ್ಯುದ್ವಾಹಕ ಧ್ರುವಗಳನ್ನು ಹೊರ ಆವರಣದಲ್ಲಿರುವ ನೀರಿನಲ್ಲಿ ಇಡುವುದರಿಂದ ಈ ಶುದ್ಧೀಕರಣ ಇನ್ನೂ ಪೂರ್ಣ ಪ್ರಮಾಣದಲ್ಲಿ ನಡೆಯುತ್ತದೆ.
ಎರಡನೆಯ ವಿಧಾನವೇ ಅತಿಸೋಸಿಕೆ (ಅಲ್ಟ್ರಾಫಿಲ್ಟ್ರೇಷನ್). ಸಾಮಾನ್ಯ ದರ್ಜೆಯ ಸೋಸುಕಾಗದದಲ್ಲಿರುವ ರಂಧ್ರಗಳು ಕಲಿಲ ಕಣಗಳೂ ಹಾದು ಹೋಗಬಹುದಾದಷ್ಟು ದೊಡ್ಡವಾಗಿರುತ್ತವೆ. ಸೋಸುಕಾಗದಕ್ಕೆ ಸಿಡಿಹತ್ತಿಯ ದ್ರವವನ್ನು (ಕಾಟೊಡೈಯನ್) ಲೇಪಿಸಿದಾಗ ರಂಧ್ರಗಾತ್ರ ಕಡಿಮೆಯಾಗುವುದು. ಇಂಥ ವಿಶೇಷ ಸೋಸುಕಾಗದಗಳಿಗೆ ಅತಿಸೋಸಕಗಳು ಎಂದು ಹೆಸರು. ಇವುಗಳ ಮೂಲಕ ಅಶುದ್ಧ ಕಲಿಲದ್ರಾವಣವನ್ನು ಸೋಸಿದಾಗ ವಿಲಂಬಿತವಸ್ತು ಮಾತ್ರ ಕಾಗದದ ಮೇಲೆಯೇ ಉಳಿಯುವುದು. ಅದನ್ನು ಬೇರ್ಪಡಿಸಿ ಮತ್ತೆ ನೀರಿಗೆ ಹಾಕಿದರೆ ಸುಲಭವಾಗಿ ಕಲಿಲದ್ರಾವಣವಾಗುವುದು. ಅತಿಕೇಂದ್ರಾಪಗಮನ ವಿಧಿ (ಅಲ್ಟ್ರಾಸೆಂಟಿ ಫ್ಯೂಜಿಂಗ್) ಮೂರನೆಯದು. ಕಲಿಲ ದ್ರಾವಣದಲ್ಲಿರುವ ಕಣಗಳು ಸದಾ ಓಡಾಡುತ್ತಿರುವುವು ಎಂಬುದು ಮುಂದೆ ಗೊತ್ತಾಗುವುದು. ಅವು ತಳವೂರದಿರಲು ಇದೂ ಒಂದು ಕಾರಣ. ಒಂದು ಮಿನಿಟಿಗೆ ಸುಮಾರು ೧೫,೦೦೦ ಸಾರಿ ಸುತ್ತುವ ಕೇಂದ್ರಾಪಗಮನ ಯಂತ್ರದಲ್ಲಿ ಕಲಿಲವನ್ನಿಟ್ಟು ತಿರುಗಿಸಿದರೆ ವಿಲಂಬಿತ ಕಣಗಳು ಜಾಗ್ರತೆಯಾಗಿ ತಳಹಿಡಿಯುವುವು. ಇದರಿಂದ ದೊರೆತ ಲೋಳೆಯನ್ನು ನೀರಿನಲ್ಲಿ ಕದಡಿದ ಕೂಡಲೇ ಕಲಿಲದ್ರಾವಣ ಪುನರವತರಿಸುತ್ತದೆ.
ಕಲಿಲ ದ್ರಾವಣಗಳ ಗುಣಲಕ್ಷಣಗಳು : ಸಾಮಾನ್ಯ ಲಕ್ಷಣಗಳು 
೧. ವಿಷಯಾಂಗಿತ್ವ (ಹೆಟಿರೋಜಿನೈಟಿ) : ನೈಜದ್ರಾಣದಲ್ಲಿರುವ ಕಣಗಳು ಅಣುಗಾತ್ರದವು. ಆದ್ದರಿಂದ ಅವು ಸಮಾಂಗಿಗಳಾಗಿ ತೋರುವುದು ಸಹಜ. ಕಲಿಲ ಕಣಗಳು ದೊಡ್ಡವಾದ್ದರಿಂದ ವಿಷಮಾಂಗಿ ಮಿಶ್ರಣವನ್ನು ಕೊಡುವುವು. ನೀರಿನಲ್ಲಿ ವಿಲಂಬಿತ ಚಿನ್ನದ ಕಲಿಲ ಕಣಗಳಿಗೆ ಸ್ಫಟಿಕ ರಚನೆಯಿರುವುದು ಎಕ್ಸ್‌ಕಿರಣಗಳ ಪರೀಕ್ಷೆಯಿಂದ ಗೊತ್ತಾಗಿದೆ. ಹೀಗಿದ್ದರೂ ಕಲಿಲ ದ್ರಾವಣಗಳು ಸಮಾಂಗಿಗಳೇ ವಿಷಮಾಂಗಿಗಳೇ ಎಂದು ತತ್ ಕ್ಷಣ ಹೇಳಲು ಬರುವುದಿಲ್ಲ.
೨ ತಳವೂರದಿರುವಿಕೆ : ಕಲಿಲ ಕಣಗಳು ಚೆದರಿದ ಸ್ಥಿತಿಯಲ್ಲಿ ಅನಿರ್ದಿಷ್ಟ ಕಾಲ ಇರಬಲ್ಲವು. ಆದ್ದರಿಂದ ಕಲಿಲ ದ್ರಾವಣಗಳು ಸ್ಥಿರಮಿಶ್ರಣಗಳು. ಉದಾಹರಣೆಗೆ ೧೮೫೭ರಲ್ಲಿ ಮೈಕೇಲ್ ಫ್ಯಾರಡೆ ತಯಾರಿಸಿದ ಚಿನ್ನದ ಕಲಿಲ ದ್ರಾವಣ ಸ್ಥಿರವಾಗಿರುವುದನ್ನು ಇಂದಿಗೂ ಲಂಡನ್ನಿನ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.
೩ ಆಸ್ಮಾಟಿಕ್ ಒತ್ತಡ : ನೈಜದ್ರಾವಣಗಳಂತೆ ಕಲಿಲದ್ರಾವಣಗಳಿಗೂ ಅಣುಸಂಖ್ಯಾ (ಕಾಲಿಗೇಟಿವ್) ಗುಣಗಳುಂಟು. ಸುಮಾರು ಸಾವಿರ ಅಣುಗಳ ಕೂಡಿ ಒಂದು ಕಲಿಲ ಕಣವಾಗುವುದೆಂದು ಲೆಕ್ಕ ಹಿಡಿಯಬಹುದು. ಅಂದರೆ ಕಲಿಲ ದ್ರಾವಣಗಳಲ್ಲಿರುವ ಕಣಗಳ ಸಂಖ್ಯೆ ಕಡಿಮೆ ಎಂದಾಯಿತು. ಆಸ್ಮಾಟಿಕ್ ಒತ್ತಡ ಸಂಖ್ಯಾಪ್ರಧಾನ ಗುಣವಾದ್ದರಿಂದ ಕಲಿಲ ದ್ರಾವಣಗಳ ಆಸ್ಮಾಟಿಕ್ ಒತ್ತಡ ಗಣನೀಯವಾಗಿರುವುದಿಲ್ಲ. ಅದನ್ನು ಅಳೆಯುವುದೂ ಸುಲಭ. ಇದರ ಆಧಾರದ ಮೇಲೆ ಒಂದು ದ್ರಾವಣದಲ್ಲಿರುವ ಕಲಿಲ ಕಣಗಳ ಸರಾಸರಿ ತೂಕವನ್ನು ಗಣಿಸಬಹುದು. ಪಿಷ್ಟದ ಕಲಿಲದ್ರಾವಣದಲ್ಲಿರುವ ಕಣಗಳ ಸರಾಸರಿ ತೂಕ ೩೨,೦೦೦ ಪರಮಾಣು ತೂಕಮಾನಗಳೆಂದು ನಿರ್ಣಯಿಸಿರುವುದು ಹೀಗೆಯೇ.
೪. ಸೋಸಿಕೆಯ ಸಾಧ್ಯತೆ (ಫಿಲ್ಟ್ರೆಬಿಲಿಟಿ) : ಸಾಮಾನ್ಯ ದರ್ಜೆಯ ಸೋಸುಕಾಗದದ ಮೂಲಕ ಕಲಿಲ ಕಣಗಳು ಹಾದುಹೋಗುವುದರಿಂದ ಅತಿಸೋಸಿಕಗಳ ಆವಶ್ಯಕತೆ ಬೀಳುತ್ತದೆ. ಮೆರುಗುಕೊಡದ ಪಿಂಗಾಣಿ ಉತ್ತಮ ಅತಿಸೋಸಕ ಎನಿಸಿಕೊಂಡಿದೆ.
ದರ್ಶನೀಯ ಲಕ್ಷಣಗಳು-ಟಿಂಡಾಲ್ ಪರಿಣಾಮ : ಕತ್ತಲು ಕೋಣೆಯಲ್ಲಿ ಇಟ್ಟಿರುವ ನೈಜ ದ್ರಾವಣದ ಮೂಲಕ ಕಿರಣಜಾಲವನ್ನು ಹಾಯಿಸಿ ಅದೇ ದಿಕ್ಕಿನಲ್ಲಿ ವೀಕ್ಷಿಸಿದಾಗ ದ್ರಾವಣ ಸ್ವಚ್ಛವಾಗಿಯೂ ಸಮಕೋನದಿಕ್ಕಿನಲ್ಲಿ ನೋಡಿದಾಗ ಮಬ್ಬಾಗಿಯೂ ಕಾಣುವುದು. ಅದೇ ಕಲಿಲ ದ್ರಾವಣವಾದರೆ ಸಮಕೋನ ದಿಸೆಯಿಂದ ನೋಡಿದಾಗ ಕಿರಣಜಾಲದ ಹಾದಿ ನೀಲಿಯ ಶಂಕುವಿನಂತೆ ವ್ಯಕ್ತವಾಗುವುದು. ಕಲಿಲ ಕಣಗಳಿಗೆ ಬೆಳಕನ್ನು ಚದರಿಸುವ ಗುಣವಿರುವುದೇ ಹೀಗಾಗಲು ಕಾರಣ ಚಿತ್ರದಲ್ಲಿ. ಈ ಪರಿಣಾಮವನ್ನು ಮೊದಲು ಗಮನಿಸಿದವನು ಫ್ಯಾರಡೆ. ಅನಂತರ ಕೂಲಂಕಷವಾಗಿ ಅಭ್ಯಸಿಸಿದವನು ಟಿಂಡಾಲ್. ಆದ್ದರಿಂದ ಇದಕ್ಕೆ ಟಿಂಡಾಲ್ ಪರಿಣಾಮ ಎಂದು ಹೆಸರಾಗಿದೆ. ನೈಜ ದ್ರಾವಣ ಟಿಂಡಾಲ್ ಪರಿಣಾಮವನ್ನು ಪ್ರದರ್ಶಿಸುವುದಿಲ್ಲ. ಅದು ಪ್ರಭಾಶೂನ್ಯವಾಗಿದೆ (ಆಪ್ಟಿಕಲಿ) ಎನ್ನುವರು. ಇದಕ್ಕೊಂದು ಸಾಮಾನ್ಯ ಉದಾಹರಣೆಯನ್ನು ನೀಡಬಹುದು. 
ಚಲನಚಿತ್ರಮಂದಿರಗಳಲ್ಲಿರುವ ಗಾಳಿ ಪರಿಶುದ್ಧವಾಗಿರುವುದು ವಿರಳ. ಅದರಲ್ಲಿ ದೂಳು ಮತ್ತು ಹೊಗೆ ಸೇರಿಯೇ ಇರುತ್ತವೆ. ಅದರಲ್ಲಿರುವ ಕಲಿಲ ಕಣಗಳು ಚಿತ್ರ ಬೀರುವ ಕಿರಣಜಾಲವನ್ನು ನೀಲಿಯ ರಿಬ್ಬನ್ನಿನಂತೆ ಕಾಣುವ ಹಾಗೆ ಮಾಡುವುವು. ದೂಳೆಬ್ಬಿಸಿದ ಕೋಣೆಯೊಂದರ ಕಿಟಕಿಯಿಂದ ತೂರಿ ಬಂದ ಬಿಸಿಲುಕೋಲು ನೀಲಿಯ ಪಟ್ಟಿಯಂತೆ ಕಾಣಲೂ ಇದೇ ಕಾರಣ. ಟಿಂಡಾಲ್ ಪರಿಣಾಮ ಮೂಡಲು ಎರಡು ನಿಂಬಂಧನೆಗಳಿವೆ. (೧) ವಿಲಂಬಿತ ಕಣಗಳ ವ್ಯಾಸಕ್ಕೂ ಉಪಯೋಗಿಸಿದ ಬೆಳಕಿನ ತರಂಗರೂರಕ್ಕೂ ಹೆಚ್ಚು ಅಂತರವಿರಬಾರದು. (೨) ವಿಲಂಬಿತ ವಸ್ತು ಮತ್ತು ಮಾಧ್ಯಮಗಳ ವಕ್ರೀಭವನಾಂಕಗಳಲ್ಲಿ ಗಣನೀಯ ವ್ಯತ್ಯಾಸವಿರಬೇಕು. ಲೀನಕಾರಿದ್ವೇಷಿ ಕಲಿಲಗಳು ಈ ನಿಯಮವನ್ನು ಪಾಲಿಸುತ್ತವೆ. 
ಟಿಂಡಾಲ್ ಪರಿಣಾಮಕ್ಕೆ ಕೈಗಾರಿಕೆಯಲ್ಲಿ ಮಹತ್ತ್ವವಿದೆ. ಸಂಪರ್ಕ ವಿಧಾನದಿಂದ ಸಲ್ಫ್ಯೂರಿಕ್ ಆಮ್ಲವನ್ನು ತಯಾರಿಸಬಹುದಷ್ಟೆ. ಅಲ್ಲಿ ಉಪಯೋಗಿಸುವ ಸಲ್ಫರ್ ಡೈಆಕ್ಸೈಡ್ ಮತ್ತು ಗಾಳಿಯ ಮಿಶ್ರಣದಲ್ಲಿ ದೂಳು ಮತ್ತು ಆರ್ಸೆನಿಕ್ ಆಕ್ಸೈಡಿನ ಕಲಿಲ ಕಣಗಳಿರುತ್ತವೆ. ಇವನ್ನು ನಿವಾರಿಸಲು ಅನೇಕ ಕೋಶಗಳನ್ನು ಒಳಗೊಂಡ ಪ್ರತ್ಯೇಕ ಶುದ್ಧೀಕರಣ ವಿಭಾಗವಿರುವುದು. ಆದರೂ ಅಲ್ಪಸ್ವಲ್ಪ ಕಶ್ಮಲಗಳು ಉಳಿದುಬಿಡುವುವು. ಇವನ್ನು ತೊಡೆದುಹಾಕಿದ ಹೊರತು ವೇಗವರ್ಧಕವಿರುವ ಕೇಂದ್ರಕ್ರಿಯಾಕೋಶಕ್ಕೆ ಅನಿಲಮಿಶ್ರಣವನ್ನು ಬಿಡುವುದಿಲ್ಲ. ಏಕೆಂದರೆ ದೂಳು ಮತ್ತು ಆರ್ಸೆನಿಕ್ ಟ್ರೈಆಕ್ಸೈಡುಗಳು ವೇಗವರ್ಧಕ ವಿಷಗಳು. ಇವು ಪ್ಲಾಟಿನಂ ವೇಗವರ್ಧಕವನ್ನು ನಿಷ್ಕ್ರಿಯಗೊಳಿಸುತ್ತವೆ. ಹೀಗಾಗದಿರಲು ಅನಿಲ ಮಿಶ್ರಣ ೧೦೦% ಭಾಗ ಪರಿಶುದ್ಧವಾಗಿರಲೇಬೇಕು. ಇದನ್ನು ಸಾಧಿಸಲು ಪೆಟ್ಟಿಗೆಯಂಥ ಕೋಶವೊಂದರ ಮೂಲಕ ಅನಿಲ ಮಿಶ್ರಣವನ್ನು ಹಾಯಿಸುವರು. ಪೆಟ್ಟಿಗೆಯ ಪಾರ್ಶ್ವಗಳಲ್ಲಿ ಗಾಜಿನ ಕಿಂಡಿಗಳಿರುತ್ತವೆ. ಅವುಗಳ ಮೂಲಕ ಪ್ರಬಲವಾದ ಕಿರಣಜಾಲವನ್ನು ಬೀರಿದರೆ ಲೇಶಮಾತ್ರ ದೂಳಿನ ಕಣಗಳಿದ್ದರೂ ಗೊತ್ತಾಗುವುದು. ಹಾಗಿದ್ದಲ್ಲಿ ಅನಿಲಮಿಶ್ರಣವನ್ನು ಪದೇ ಪದೇ ಶುದ್ಧೀಕರಣ ಘಟಕಕ್ಕೆ ಹಿಂತಿರುಗಿಸಲಾಗುವುದು.
೨. ಅತಿ ಸೂಕ್ಷ್ಮದರ್ಶಕ (ಅಲ್ಟ್ರಾಮೈಕ್ರೊಸ್ಕೋಪ್) : ಕಲಿಲ ಕಣಗಳನ್ನು ವೀಕ್ಷಿಸಲು ಬಳಸುವ ವಿಶೇಷ ಸಾಧನವಿದು. ಅದರ ವಿವರಗಳು ಚಿತ್ರದಲ್ಲಿವೆ.
ಮೇಲೆ ವಿಧಿಸಿದ ವಿಶೇಷ ಭಂಗಿಯಲ್ಲಿ ನೋಡಿದಾಗ ಕಲಿಲ ಕಣಗಳು ಬೆಳಕಿನ ಚುಕ್ಕಿಗಳಂತೆ ತೋರುತ್ತವೆ. ಒಂದೊಂದು ಚುಕ್ಕಿಯಿರುವ ಎಡೆಯಲ್ಲೆಲ್ಲ ಒಂದೊಂದು ಕಲಿಲ ಕಣವಿದೆಯೆಂದು ಊಹಿಸಿಕೊಳ್ಳಬಹುದು. ಈ ಸಲಕರಣೆಯಿಂದ ಕಲಿಲ ಕಣಗಳ ರೂಪರೇಖೆಗಳ ಅರಿವು ನಮಗಾಗಿದೆ. ಉದಾಹರಣೆಗೆ ಆರ್ಸೆನಿಕ್ ಟ್ರೈಸಲ್ಫೈಡ್ ಸಾಲ್ನಲ್ಲಿರುವ ಕಣಗಳು ಗೋಳಾಕಾರವಾಗಿಯೂ ಕೂಡಿಟ್ಟ ಫೆರಿಕ್ ಹೈಡ್ರಾಕ್ಸೈಡ್ ಸಾಲ್ನಲ್ಲಿರುವ ಕಣಗಳು ಚಪ್ಪಟೆಯಾಗಿಯೂ ವೆನೇಡಿಯಂ ಪೆಂಟಾಕ್ಸೈಡಿನ ಕಲಿಲ ಕಣಗಳು ಸಲಾಕೆಗಳಂತೆ ಉದ್ದುದ್ದವಾಗಿಯೂ ಇರುವುವು ಎಂದು ತಿಳಿದುಬಂದಿದೆ. ಅಲ್ಲದೆ ಅತಿಸೂಕ್ಷ್ಮದರ್ಶಕದ ಸಹಾಯದಿಂದ, ಗೊತ್ತಾದ ಗಾತ್ರದ ಕಲಿಲದ್ರಾವಣದಲ್ಲಿರುವ ಕಣಗಳನ್ನು ಎಣಿಸಬಹುದು. ಕಲಿಲ ದ್ರಾವಣ ವಾಸ್ತವವಾಗಿ ವಿಷಮಾಂಗಿ ಎಂದು ಮನದಟ್ಟಾಗುವುದು ಅತಿಸೂಕ್ಷ್ಮದರ್ಶಕದಿಂದ ನೋಡಿದಾಗಲೇ ಕಲಿಲಕಣಗಳು ನಿರಂತರ ಚಲನೆಯಲ್ಲಿರುವ ಸಂಗತಿ ಬಯಲಾದದ್ದು ಈ ದರ್ಶನಸಾಧನದಿಂದ. ಅತಿಸೂಕ್ಷ್ಮದರ್ಶಕವನ್ನು ನಿರ್ಮಿಸಿದ ಕೀರ್ತಿ ರಸಾಯನಶಾಸ್ತ್ರಜ್ಞನಾದ ಜಿûಗ್ಮಾಂಡಿ (೧೮೬೫-೧೯೨೯) ಮತ್ತು ಭೌತ ವಿಜ್ಞಾನಿಯಾದ ಸೀಡೆನ್ ಟೊಪ್ಫ್‌ ಎಂಬ ಎಬ್ಬರು ಜರ್ಮನ್ ದೇಶೀಯರಿಗೆ ಸಲ್ಲುತ್ತದೆ.
೩. ಬ್ರೌನಿಯನ್ ಚಲನೆ : ಇಂಗ್ಲಿಷ್ ಸಸ್ಯಶಾಸ್ತ್ರಜ್ಞನಾದ ರಾಬರ್ಟ್ ಬ್ರೌನ್ (೧೭೭೮-೧೮೫೮) ಪರಾಗದೂಳನ್ನು ನೀರಿನಲ್ಲಿ ಕದಡಿ ಅತಿಸೂಕ್ಷ್ಮದರ್ಶಕದಿಂದ ನೋಡಿದಾಗ (೧೮೨೭) ಪರಾಗಕಣಗಳು ನಿರಂತರ ಚಲನೆಯಲ್ಲಿರುವುದನ್ನು ಕಂಡ. ಈ ಗುಣಧರ್ಮ ಪರಾಗದೂಳಿನ ವೈಶಿಷ್ಟ್ಯವಾಗಿದ್ದರೆ ಕಲಿಲಸ್ಥಿತಿಯಲ್ಲಿರುವ ಸಮಸ್ತ ವಸ್ತುಗಳಿಗೂ ಅನಿವಾರ್ಯವಾಗಿ ಪ್ರಾಪ್ತವಾಗುವ ಗುಣವೆಂದು ವಿಶೇಷ ಅಧ್ಯಯನದಿಂದ ಮುಂದೆ ವೇದ್ಯವಾಯಿತು. ಮೊದಲು ಇದನ್ನು ಜಗತ್ತಿಗೆ ಸಾರಿದವರು ರಾಬರ್ಟ್ ಬ್ರೌನನಾದ್ದರಿಂದ ಕಲಿಲ ಕಣಗಳ ಅವ್ಯಾಹತ ಚಲನಗುಣಕ್ಕೆ ಬ್ರೌನಿಯನ್ ಚಲನೆ ಎಂದು ಹೆಸರಿಡಲಾಯಿತು.
ಮಾಧ್ಯಮದ ಅಣುಗಳಿಗೆ ಹೋಲಿಸಿದರೆ ಕಲಿಲ ಕಣಗಳು ಸಾಕಷ್ಟು ದೊಡ್ಡವು. ಇವೆರಡರ ನಡುವೆ ಡಿಕ್ಕಿಗಳು ಎಡೆಬಿಡದೆ ನಡೆದಿರುತ್ತವೆ. ಯಾವ ದಿಸೆಯಲ್ಲಿ ಹೆಚ್ಚಿನ ಅಣುಗಳು ಎಡತಾಕಿ ಕಲಿಲ ಕಣವನ್ನು ಗುದ್ದುವುವೋ ಆ ದಿಕ್ಕಿನಲ್ಲಿ ಅದು ದೂಡಲ್ಪಡುವುದು. ಪರಿಣಾಮವಾಗಿ ಕಲಿಲ ಕಣದ ಚಲನ ಪಥ ವಕ್ರಗತಿಯ ದಾಗಿದ್ದು ಚಿತ್ರದಲ್ಲಿ ತೋರಿಸಿರುವಂತೆ ಅಡ್ಡಾದಿಡ್ಡಿಯಾಗಿರುವುದು. ಬಿರುಗಾಳಿಯ ನಡುವೆ ಸಮುದ್ರಮಧ್ಯದಲ್ಲಿ ಸಿಕ್ಕಿಕೊಂಡು ಅಲೆಗಳ ಹೊಡೆತದಿಂದ ಹಿಂದೆ ಮುಂದೆ ಮೇಲೆ ಕೆಳಗೆ ಓಲಾಡುತ್ತ ಸಾಗುವ ಅಸಹಾಯಕ ಅಂಬಿಗನ ದೋಣಿಯಂತೆ ಕಲಿಲ ಕಣವೂ ಕುಣಿದು ಕುಪ್ಪಳಿಸುತ್ತಿರುತ್ತದೆ. ಕತ್ತಲುಕೋಣೆಯನ್ನು ಬೆಳಗುವ ಬಿಸಿಲುಕೋಲಿನಲ್ಲಿರುವ ದೂಳಿನ ಕಣಗಳೂ ಹೀಗೆಯೇ ಪರದಾಡುತ್ತಿರುವುದನ್ನು ಕಾಣುತ್ತೇವೆ. ಬ್ರೌನಿಯನ್ ಚಲನೆಗೂ ವಸ್ತುವಿನ ಸ್ವಭಾವಕ್ಕೂ ಯಾವ ಸಂಬಂಧವೂ ಇಲ್ಲ. ಉಷ್ಣತೆ ಮತ್ತು ಕಣಗಾತ್ರಗಳನ್ನು ಮಾತ್ರ ಅದು ಅವಲಂಬಿಸಿದೆ. ಅನಿಲದಲ್ಲಿರುವ ಅಣುಗಳೂ ಹೀಗೆಯೇ ಓಡಾಡುತ್ತಿರುತ್ತವೆ ಎಂಬ ಸಿದ್ಧಾಂತಕ್ಕೆ ಬ್ರೌನಿಯನ್ ಚಲನೆ ಸಾಕ್ಷಿಯಾಗಿದೆ. ಇದನ್ನು ಅಳೆದು ಅವೊಗ್ಯಾಡ್ರೊ ಅಂಕವನ್ನು ಗಣಿಸಬಹುದು. ಐನ್ಸ್ಟೈನನ ಕೆಳಕಂಡ ಸಮೀಕರಣ ಇದಕ್ಕೆ ಸಹಾಯಕವಾಗಿದೆ :

ಇಲ್ಲಿ  ಸೆಕೆಂಡುಗಳಲ್ಲಿ ಅಪೇಕ್ಷಿತ ಅಕ್ಷದಲ್ಲಿ ಕಲಿಲ ಗಮಿಸುವ ಸರಾಸರಿ ದೂರ; ಖ = ಅನಿಲ ನಿಯತಾಂಕ; ಖಿ = ನಿರಪೇಕ್ಷ ಮಾನದಲ್ಲಿ ಉಷ್ಣತೆ; ಓ = ಅವೊಗ್ಯಾಡ್ರೊ ಅಂಕ; = ಮಾಧ್ಯಮದ ಸ್ನಿಗ್ಧತೆಯ ಗುಣಾಂಕ; (ಚುನಾಯಿತ ಕಣದ ತ್ರಿಜ್ಯ. ಈ ನಿರಂತರ ಚಲನೆಯ ಫಲವಾಗಿ ಕಲಿಲ ಕಣಗಳು ಗುರುತ್ವಾಕರ್ಷಣೆಯನ್ನು ತಪ್ಪಿಸಿಕೊಂಡು ಒತ್ತರಿಸದೆ ಉಳಿಯಲು ಶಕ್ತವಾಗಿವೆ.
೪. ಬಣ್ಣ : ಕಲಿಲ ದ್ರಾವಣದ ಬಣ್ಣ ಕೆಳಕಂಡ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. (೧) ಕಣದ ಗಾತ್ರ ಮತ್ತು ಆಕಾರ, (೨) ವಸ್ತು ಮತ್ತು ಮಾಧ್ಯಮಗಳ ಬೆಳಕು ಗ್ರಹಣಶಕ್ತಿ, (೩) ಅದರ ಮೇಲೆ ಬಿದ್ದ ಬೆಳಕಿನ ತರಂಗದೂರ, (೪) ಆ ಬೆಳಕನ್ನು ನಾವು ವೀಕ್ಷಿಸುವ ಬಗೆ, ಅಂದರೆ ಪ್ರತಿಫಲನ ವಿಧಾನದಿಂದಲೇ ಅಥವಾ ಪಾರಗಮನ (ಟ್ರಾನ್ಸ್‌ಮಿಷನ್) ವಿಧಾನದಿಂದಲೇ ಎಂಬುದನ್ನು ಅನುಸರಿಸಿ. ಉದಾಹರಣೆಗೆ, ಚಿನ್ನದ ಕೆಂಪು ಕಲಿಲ ದ್ರಾವಣ ನೀಲಿಯಾಗುವಾಗ ಅದರಲ್ಲಿರುವ ಕಣಗಳು ದೊಡ್ಡದಾಗುತ್ತ ಹೋಗುವುವು ಮತ್ತು ಗೋಳಾಕಾರ ತ್ಯಜಿಸಿ ಚಪ್ಪಟೆರೂಪ ತಳೆಯುವುವು. ಪ್ರತಿಫಲಿತ ಬೆಳಕಿನಲ್ಲಿ ನೋಡಿದಾಗ ನೀಲಿಯಾಗಿಯೂ ರವಾನಿತ ಬೆಳಕಿನಲ್ಲಿ ನೋಡಿದಾಗ ಕೆಂಪಾಗಿಯೂ ಕಾಣುವುದು ಹಾಲು ಮತ್ತು ನೀರಿನ ಮಿಶ್ರಣದ ವೈಶಿಷ್ಟ್ಯ. ಸೋಡಿಯಂ ಥಯೊಸಲ್ಫೇಟಿನ ದ್ರಾವಣಕ್ಕೆ ದುರ್ಬಲ ಹೈಡ್ರೊಕ್ಲೋರಿಕ್ ಆಮ್ಲವನ್ನು ಸೇರಿಸಿದರೆ ಗಂಧಕದ ಕಲಿಲ ಆಗುವುದು. ಈ ಕಣಗಳು ಕ್ರಮೇಣ ದೊಡ್ಡದಾಗುತ್ತ ಹೋಗುವುದರಿಂದ ರವಾನಿತ ಬೆಳಕಿನಲ್ಲಿ ನೋಡಿದಾಗ ಸೂರ್ಯ ಮುಳುಗುವ ಹೊತ್ತಿನಲ್ಲಿ ಆಗುವ ಬಣ್ಣ ಬದಲಾವಣೆಯ ಸೊಬಗಿನ ದೃಶ್ಯ ಗೋಚರಿಸುತ್ತದೆ.
ವಿದ್ಯುತ್ ಪ್ರಧಾನ ಲಕ್ಷಣಗಳು. ೧ ಎಲೆಕ್ಟ್ರೊಫಾರಿಸಿಸ್: ಬ್ರೌನಿಯನ್ ಚಲನೆಯ ಫಲವಾಗಿ ಕಲಿಲ ಕಣಗಳು ಪರಸ್ಪರ ಡಿಕ್ಕಿ ಹೊಡೆಯುವುದು ಅನಿವಾರ್ಯ. ಆಗ ಅವು ಅಂಟಿಕೊಂಡು ಗಾತ್ರವರ್ಧನೆಯಾಗಬೇಕು. ಉತ್ಪತ್ತಿಯಾದ ದೊಡ್ಡ ಕಣಗಳು ಗುರುತ್ವಾಕರ್ಷಣೆಯ ದೆಸೆಯಿಂದ ತಳವೂರಬೇಕು. ಆದರೆ ವಾಸ್ತವವಾಗಿ ಹೀಗಾಗುವುದಿಲ್ಲ. ಕಲಿಲಸ್ಥಿತಿಯಲ್ಲಿರುವ ವಸ್ತು ಬಹುಸ್ಥಿರವಾಗಿರುತ್ತದೆ. ಇದೊಂದು ವಿರೋಧಾಭಾಸ. ಇದನ್ನು ಸಮರ್ಥಿಸಲು ಒಂದು ಮಾಧ್ಯಮದಲ್ಲಿರುವ ಕಲಿಲ ಕಣಗಳೆಲ್ಲ ಒಂದೇ ತೆರನಾದ ವಿದ್ಯುದಂಶವನ್ನು ಧರಿಸಿರುತ್ತವೆ; ಇಂಥ ವಿದ್ಯುದ್ಭರಿತ ಕಣಗಳು ಪರಸ್ಪರ ಸಮೀಪಿಸಿದಾಗ ಪ್ರಬಲ ವಿಕರ್ಷಣೆಯುಂಟಾಗುವುದು ಸ್ವಾಭಾವಿಕ; ಇದರಿಂದ ಅವು ಒಟ್ಟುಗೂಡದೆ ಹಿಂಜರಿಯುತ್ತವೆ ಎಂದು ಪ್ರತಿಪಾದಿಸಲಾಗಿದೆ. ಕಲಿಲ ಕಣಗಳ ಮೇಲೆ ವಿದ್ಯುದಂಶವಿದೆಯೆಂಬುದನ್ನು ಕೆಳದಂಡ ಪ್ರಯೋಗ ಸಮರ್ಥಿಸುವುದು. U-ಆಕಾರದ ನಾಳದಲ್ಲಿ ಆರ್ಸೆನಿಕ್ ಟ್ರೈಸಲ್ಫೈಡಿನ ಕಲಿಲದ್ರಾವಣವನ್ನು ಇಡಲಾಗಿದೆ. 
ದ್ರಾವಣದ ಮೇಲೆ ಬಟ್ಟಿ ಇಳಿಸಿದ ನೀರು ಅಥವಾ ದುರ್ಬಲ ಅಸಿಟಿಕ್ ಆಮ್ಲವಿರಬಹುದು. ಅದರಲ್ಲಿ ಎರಡು ಪ್ಲಾಟಿನಂ ಧ್ರುವಗಳನ್ನಿಟ್ಟು ವಿದ್ಯುತ್ಕೋಶಕ್ಕೆ ಲಗತ್ತಿಸಿರಲಾಗುವುದು. ಕಲಿಲದಲ್ಲಿ ಯೂರಿಯಾ ವಿಲೀನ ಮಾಡಿದರೆ ಮಿಶ್ರಣದ ಸಾಂದ್ರತೆ ಹೆಚ್ಚಿ ದ್ರಾವಣಗಳ ಸಂಧಿ ಸ್ಥಳ ಸ್ಪಷ್ಟವಾಗುವುದು. ಅವೆರಡರ ನಡುವೆ ತೊಗಲು ಕಾಗದವಿದ್ದರೆ ಇನ್ನೂ ಅನುಕೂಲ. ಉಪಕರಣವನ್ನು ಹೀಗೆ ಹೊಂದಿಸಿಕೊಂಡು ವಿದ್ಯುತ್ತನ್ನು ಹಾಯಿಸಿದರೆ ಕಲಿಲ ನಿರ್ದಿಷ್ಟ ಧ್ರುವದ ದಿಕ್ಕಿನಲ್ಲಿ ಸರಿಯುವುದು. ಒಂದು ಭಾಗದಲ್ಲಿ ಮಾತ್ರ ಕಲಿಲದ ಮಟ್ಟ ಏರುವುದು. ಧನ ವಿದ್ಯುದಂಶವಿರುವ ಕಲಿಲ ಋಣ ಧ್ರುವದೆಡೆಗೂ ಋಣ ವಿದ್ಯುದಂಶವಿರುವ ಕಲಿಲ ಧನ ಧ್ರುವದ ಕಡೆಗೂ ಸಾಗುವುವು. ಈ ಕ್ರಿಯಾವೈಶಿಷ್ಟ್ಯವನ್ನು ಕ್ರಮವಾಗಿ ಕೆಟಫಾರಿಸಿಸ್ ಮತ್ತು ಅನಫಾರಿಸಿಸ್ ಎನ್ನುವರು. ಎರಡನ್ನೂ ಒಟ್ಟಾರೆ ಎಲೆಕ್ಟ್ರೊಫಾರಿಸಿಸ್ ಎನ್ನುವುದು ವಾಡಿಕೆ. ಲೋಹದ ಆಕ್ಸೈಡ್ ಮತ್ತು ಹೈಡ್ರಾಕ್ಸೈಡ್ ಕಲಿಲಗಳು ಅನಫಾರಿಸಿಸ್ ಕ್ರಿಯೆಗೆ ನಿದರ್ಶನಗಳು. ಬಹುಪಾಲು ಕಲಿಲಗಳು ಹೀಗೆ ವರ್ತಿಸುತ್ತವೆ. ಆದೇಶಿತ ವಿದ್ಯುತ್ ಕ್ಷೇತ್ರದಲ್ಲಿ ಕಲಿಲದ ಚಲನವೇಗವನ್ನು ಗಮನಿಸಿ ಅದರ ಕಣಗಳು ಹೊತ್ತಿರುವ ವಿದ್ಯುದಂಶದ ಪ್ರಮಾಣವನ್ನೂ ಊಹಿಸಬಹುದು. ಆದರೆ ಆಲ್ಬುಮಿನ್ನಿನಂಥ ಕೆಲವು ಲೀನಕಾರಿ ಅಭಿಮಾನಿ ಕಲಿಲಗಳು ನಿರ್ದಿಷ್ಟ ಠಿಊ ಮೌಲ್ಯದಲ್ಲಿ ಯಾವ ಧ್ರುವದೆಡೆಗೂ ಸರಿಯದೆ ತಟಸ್ಥವಾಗಿರುವುವು. ಆ ಠಿಊ ಮೌಲ್ಯಕ್ಕೆ ಕಲಿಲದ ಸಮವಿದ್ಯುದ್ಬಿಂದು (ಐಸೊಎಲೆಕ್ಟ್ರಿಕ್ ಬಿಂದು) ಎಂದು ಹೆಸರು. ಈ ಸ್ಥಿತಿಯಲ್ಲಿ ಕಲಿಲ ಬಲು ಅಸ್ಥಿರವಾಗಿರುತ್ತದೆ.
ಆದೇಶಿತ ವಿದ್ಯುತ್ ಕ್ಷೇತ್ರದಲ್ಲಿ ಕಲಿಲ ಕಣಗಳು ಚಲಿಸದಂತೆ ತಡೆದರೆ. ಮಾಧ್ಯಮವೇ ವಿರುದ್ಧ ದಿಕ್ಕಿನಲ್ಲಿ ಸರಿಯುವ ವಿಚಿತ್ರ ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೆ ಎಲೆಕ್ಟ್ರೊ ಆಸ್ಮಾಸಿಸ್ ಎಂದು ಹೆಸರು. ಇದಕ್ಕಾಗಿ ಬಳಸುವ ಉಪಕರಣದ ವಿವರ ಚಿತ್ರದಲ್ಲಿದೆ. ಒ ಮತ್ತು ಒ’ ಎರಡು ಅರ್ಧಪಾರಗಮ್ಯ ಪೊರೆಗಳು. ಇವುಗಳಿಂದ ಉಪಕರಣ ಮೂರು ಭಾಗಗಳಾಗಿದೆ. ಮಧ್ಯಭಾಗದಲ್ಲಿ ಕಲಿಲದ್ರಾವಣವಿದೆ. ಇಕ್ಕೆಲ್ಲಗಳಲ್ಲಿ ನೀರಿದೆ. ಖಿ ಮತ್ತು ಖಿ’ ಎರಡು ನಳಿಗೆಗಳು. ಇ ಮತ್ತು ಇ’ ಎರಡು ಧ್ರುವಗಳು. ಇವನ್ನು ವಿದ್ಯುತ್ ಕೋಶಕ್ಕೆ ಹಚ್ಚಿದರೆ ಒಂದು ಭಾಗದಲ್ಲಿ ನೀರಿನ ಮಟ್ಟ ಇಳಿದು ಮತ್ತೊಂದರಲ್ಲಿ ಏರುವುದು. ಪ್ರವಾಹದಿಸೆ ಕಣಗಳು ಹೊತ್ತಿರುವ ವಿದ್ಯುದಂಶಕ್ಕೆ ಅನುಗುಣವಾಗಿರುತ್ತದೆ. ಕಲಿಲ ಕಣಗಳಲ್ಲಿ ಧನವಿದ್ಯುದಂಶವಿದ್ದರೆ ಅವು ಋಣ ಧ್ರುವದ ಕಡೆ ಸರಿಯುವ ಬದಲು ಮಾಧ್ಯಮವೇ ಧನ ಧ್ರುವದತ್ತ ಅಂದರೆ ಃ ಯಿಂದ ಂ ಕಡೆಗೆ ಸಾಗುವುದು. ಋಣವಿದ್ಯುದ್ಭರಿತ ಕಲಿಲಗಳಾದರೆ ಪ್ರವಾಹದ ದಿಕ್ಕು ಂ ಯಿಂದ ಃ ಕಡೆಗಿರುವುದು. ಕಲಿಲ ಕಣಗಳು ವಿದ್ಯುದ್ಭರಿತವಾಗಲು ಕಾರಣವುಂಟು. ವಸ್ತುವನ್ನು ಕಲಿಲಸ್ಥಿತಿಗೆ ತಂದಾಗ ಅದರ ಮೇಲ್ಮೈವಿಸ್ತೀರ್ಣ ಅಪಾರವಾಗಿರುವುದಷ್ಟೆ. ಆಗ ಕಲಿಲವು ತನ್ನ ಅಂಗ ಅಯಾನುಗಳ ಪೈಕಿ ಯಾವುದೊಂದು ಮಾಧ್ಯಮದಲ್ಲಿದ್ದರೂ ಸರಿಯೇ ಅದನ್ನು ಆಕರ್ಷಿಸಿ ತನ್ನ ಮೈಮೇಲೆ ಕೂಡಿಸಿಕೊಳ್ಳುವುದು. ಹೀಗೆ ಅಯಾನಾವರಿತ ಕಲಿಲ ವಿದ್ಯುತ್ಪುರಿತವಾಗುತ್ತದೆ.
೨. ಗರಣೆಗಟ್ಟುವಿಕೆ (ಕೊ ಆ್ಯಗ್ಯುಲೇಷನ್) : ಕಲಿಲಕಣದ ಮೇಲಿರುವ ವಿದ್ಯುದಂಶ ಅದರ ಸ್ಥಿರತೆಗೆ ಕಾರಣವಾದರೆ ಅದನ್ನು ತೊಡೆದುಹಾಕಿದಾಗ ವಿದ್ಯುದ್ರಹಿತ ಕಣಗಳು ಒಂದುಗೂಡಿ ದೊಡ್ಡವಾಗಿ ಗುರುತ್ವಾಕರ್ಷಣೆಗೆ ಒಳಪಟ್ಟು ಒತ್ತರಿಸಲೇಬೇಕು. ಇದು ಪ್ರಯೋಗದಿಂದಲೂ ದೃಢಪಟ್ಟಿದೆ. ಕಲಿಲಕ್ಕೆ ಎಲೆಕ್ಟ್ರೊಲೈಟ್ ಸೇರಿಸಿದಾಗ ಅದರಲ್ಲಿರುವ ಅಯಾನುಗಳು ಈ ಕೆಲಸ ಮಾಡುತ್ತವೆ. ಧನ ಕಲಿಲವಾದರೆ ಋಣ ಅಯಾನುಗಳನ್ನು ತನ್ನೆಡೆಗೆ ಆಕರ್ಷಿಸಿಕೊಂಡು ವಿದ್ಯುದ್ರಹಿತವಾಗುತ್ತದೆ. ಈ ಕ್ರಿಯೆಗೆ ಗರಣೆಗಟ್ಟುವಿಕೆ ಎಂದು ಹೆಸರು. ಪರಸ್ಪರ ವಿರುದ್ಧ ವಿದ್ಯುದಂಶಗಳಿರುವ ಕಲಿಲಗಳನ್ನು ಕೂಡಿಸಿದಾಗಲೂ ಹೀಗಾಗುವುದು. ವಿದ್ಯುತ್ತನ್ನು ಹಾಯಿಸಿದಾಗ ವಿರುದ್ಧ ದ್ರುವದತ್ತ ಸಾಗಿದ ಕಲಿಲ ಅಲ್ಲೇ ಒತ್ತರಿಸುವುದು. ಮಿತಿಮೀರಿ ಡಯಾಲಿಸಿಸ್ ಮಾಡಿದಾಗ ಕಲಿಲದ ಮೈಗೆ ಅಂಟಿರುವ ಅಯಾನುಗಳು ವಿಸರ್ಜನೆಗೊಂಡ ಕಲಿಲ ಹೆಪ್ಪುಗಟ್ಟುವುದು. ಆದ್ದರಿಂದ ಒತ್ತರಕ್ಕೆ ಅಗತ್ಯವಾದ ಅಣುವಿನ ಪ್ರಮಾಣ ಅದರ ವೇಲೆನ್ಸಿಯನ್ನು ಅವಲಂಬಿಸಿರುತ್ತದೆ. ಇದೇ ಹಾರ್ಡಿ_ಷುಲ್ತ್ಸೆ ನಿಯಮ. ಉದಾಹರಣೆಗೆ ಋಣ ಕಲಿಲವಾದ ಆರ್ಸೆನಿಕ್ ಟ್ರೈಸಲ್ಫೈಡನ್ನು ಒತ್ತರಿಸುವುದರಲ್ಲಿ ಏಕ ವೇಲೆನ್ಸೀಯ ಧನ ಅಯಾನುಗಳಿಗಿಂತ ದ್ವಿವೇಲೆನ್ಸೀಯ ಅಯಾನುಗಳು ೭೦ರಷ್ಟೂ ಮತ್ತು ತ್ರಿವೇಲೆನ್ಸೀಯ ಅಯಾನುಗಳು ಸುಮಾರು ೫೦೦ಪಟ್ಟೂ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಒಂದು ಲೀಟರಿನಷ್ಟು ನಿರ್ದಿಷ್ಟ ಕಲಿಲವನ್ನು ಗರಣೆ ಗಟ್ಟಿಸಲು ಅಗತ್ಯವಾದ ಎಲೆಕ್ಟ್ರೊಲೈಟಿನ ಕನಿಷ್ಠ ಪ್ರಮಾಣಕ್ಕೆ ಅದರ ಒತ್ತರ ಮೌಲ್ಯ (ಫ್ಲೋಕ್ಯುಲೇಷನ್ ವೇಲ್ಯೂ) ಎಂದು ಹೆಸರು. ಇದನ್ನು ಮಿಲಿಮೋಲುಗಳಲ್ಲಿ ಸೂಚಿಸುವುದು ಪದ್ಧತಿ. ಆರ್ಸೆನಿಕ್ ಟ್ರೈಸಲ್ಫೈಡ್ ಮತ್ತು ಫೆರಿಕ್ ಹೈಡ್ರಾಕ್ಸೈಡ್ ಕಲಿಲ ದ್ರಾವಣಗಳನ್ನು ಒತ್ತರಿಸುವುದರಲ್ಲಿ ವಿವಿಧ ಎಲೆಕ್ಟ್ರೊಲೈಟುಗಳ ಪಾತ್ರವನ್ನು ಪುಟ ೨೪೫ರ ಆರಂಭದಲ್ಲಿರುವ ಪಟ್ಟಿಯಲ್ಲಿ ಸೂಚಿಸಿರುವ ಆಯಾ ಒತ್ತರಮೌಲ್ಯಗಳು ತೋರುತ್ತವೆ. 
೩ ರಕ್ಷಣೆ : ಕೆಲ ಲೀನಕಾರಿ ಅಭಿಮಾನಿ ಕಲಿಲಗಳ ಸಂಪರ್ಕದಲ್ಲಿ ಲೀನಕಾರಿದ್ವೇಷಿ ಕಲಿಲಗಳು ಅಲ್ಪಪ್ರಮಾಣ ಎಲೆಕ್ಟ್ರೊಲೈಟನ್ನು ಸೇರಿಸಿದರೂ ಗರಣೆಗಟ್ಟುವುದಿಲ್ಲ. ಉದಾಹರಣೆಗೆ ಚಿನ್ನದ ಕೆಂಪು ಕಲಿಲದ್ರಾವಣ ಜಿಲೆಟಿನ್ನಿನ ಸಂಪರ್ಕದಲ್ಲಿ ಸ್ವಲ್ಪ ಉಪ್ಪನ್ನು ಕೂಡಿಸಿದರೂ ಗರಣೆಗಟ್ಟದೆ ಉಳಿಯುವುದು. ಆಗ ಚಿನ್ನದ ಕಲಿಲ ಜಿಲೆಟಿನ್ನಿನಿಂದ ರಕ್ಷಿಸಲ್ಪಟ್ಟಿದೆ ಎನ್ನುತ್ತೇವೆ. ಚಿನ್ನವನ್ನು ರಕ್ಷಿತ ಕಲಿಲವೆಂದೂ ಜಿಲೆಟಿನ್ನನ್ನುರಕ್ಷಣಾಕಲಿಲವೆಂದೂ ಕರೆಯುವುದು ರೂಢಿ. ಚಿನ್ನದ ಕಲಿಲಕಣದ ಸುತ್ತ ಜಿಲೆಟಿನ್ನಿನ ರಕ್ಷಾಕವಚವೇರ್ಪಟ್ಟು ಎಲೆಕ್ಟ್ರೊಲೈಟಿನ ಸಂಪರ್ಕ ತಪ್ಪಿಹೋಗುವುದೇ ಇದಕ್ಕೆ ಕಾರಣವಿರಬೇಕೆಂದು ಭಾವಿಸಲಾಗಿದೆ. ವಿವಿಧ ರಕ್ಷಣಾ ಕಲಿಲಗಳ ಶಕ್ತಿಯನ್ನು ಅಳೆಯಲು ಜಿûಗ್ಮಾಂಡಿ ಸುವರ್ಣಾಂಕ (ಗೋಲ್ಡ್‌ ನಂಬರ್) ಎಂಬ ಮಾನವನ್ನು ರೂಪಿಸಿದ್ದಾರೆ. ಅದರ ಪ್ರಕಾರ ಒಂದು ಮಿಲಿಲೀಟರಿನಷ್ಟು ಶೇ. ೧೦ ಸೋಡಿಯಂ ಕ್ಲೋರೈಡಿನ ದ್ರಾವಣವನ್ನು ಕ್ಷಿಪ್ರವಾಗಿ ಸೇರಿಸಿದಾಗ ೧೦ ಮಿಲಿಲೀಟರು ಚಿನ್ನದ ಕೆಂಪು ಕಲಿಲ ದ್ರಾವಣ ಗರಣೆಗಟ್ಟದಂತೆ (ನೀಲಿ ಬಣ್ಣಕ್ಕೆ ತಿರುಗದಂತೆ) ತಡೆಯಲು ಅಗತ್ಯವಾದ 
 ಆರ್ಸೆನಿಕ್ ಟ್ರೈಸಲ್ಫೈಡ್ ಸಾಲ್          ಪೇರಿಕ್ ಹೈಡ್ರಾಕ್ಸೈಡ್ ಸಾಲ್
	ಎಲೆಕ್ಟ್ರೊ	ಅಯಾನು	ಒತ್ತರ 	ಎಲೆಕ್ಟ್ರೊ	ಅಯಾನು	ಒತ್ತರ 		ಲೈಟ್		ಮೌಲ್ಯ	ಲೈಟ್		ಮೌಲ್ಯ
	ಓಚಿಅಟ	ಓಚಿ+	೫೨,೦೦೦	ಏಅಟ	ಅಟ-	೧೦೨.೦೦೦		ಏಅಟ	ಏ+	೫೨,೦೦೦	ಏಃಡಿ	ಃಡಿ-	೧೩೪.೦೦೦
	ಏಓಔ೩	ಏ+	೫೦,೦೦೦	ಏಓಔ೩	ಓಔ೩	೧೩೨.೦೦೦
	ಒgSಔ೪	ಒg೨+	೦.೮೨೦	ಏಃಡಿಔ೩	ಃಡಿಔ೩-	೧೩೩.೦೦೦
	ಃಚಿಅಟ೨	ಃಚಿ೨ +	೦.೬೯೦	ಏ೨ಅಡಿಔ೪	ಅಡಿಔ೪೨-	೦.೩೨೫
	Zಟಿಅಟ೨	 Zಟಿ೨ +	೦.೬೮೦	ಏ೨Sಔ೪	Sಔ೪೨-	೦.೨೧೦
	ಂಟಅಟ೩	ಂಟ೩ +	೦.೦೯೩	ಏ೩[ಈe(ಅಓ)೬]	[ಈe(ಅಓ)೬]೩-	೦.೦೯೬
ರಕ್ಷಣಾ ಕಲಿಲದ ಮಿಲಿಗ್ರಾಂತೂಕಕ್ಕೆ ಅದರ ಸುವರ್ಣಾಂಕವೆಂದು ಹೆಸರು. ಕೆಲವು ಲೀನಕಾರಿ ಅಭಿಮಾನಿಗಳ ಕಲಿಲಗಳ ಸುವರ್ಣಾಂಕಗಳನ್ನು ಮುಂದೆ ಕೊಡಲಾಗಿದೆ.
ಜಿಲೆಟಿನ್ 	. . .	೦.೦೦೫_೦.೦೧
ಹೀಮೊಗ್ಲೋಬಿನ್ 	. . .	೦.೦೩
ಮೊಟ್ಟೆಯ ಆಲ್ಬುಮಿನ್ 	. . .	೦.೧೫_೦.೨೫
ಸೋಡಿಯಂ ಓಲಿಯೇಟ್ 	. . .	೦.೪_೧.೦
ಆಲೂಗೆಡ್ಡೆಯ ಪಿಷ್ಟ 	. . .	೨೫
ನಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಫಾಸ್ಫೇಟಿನಂಥ ಅಲ್ಪದ್ರಾವ್ಯವಾದ ವಸ್ತುಗಳಿವೆ. ಅವು ಕಲಿಲಸ್ಥಿತಿಯಲ್ಲೇ ಉಳಿಯುವಂತೆ ರಕ್ತದಲ್ಲಿರುವ ಸಸಾರಜನಕಗಳು ನೋಡಿಕೊಳ್ಳುತ್ತವೆ. ಲೀನಕಾರಿಅಭಿಮಾನಿ ಮತ್ತು ಲೀನಕಾರಿದ್ವೇಷಿ ಕಲಿಲಗಳ ಗುಣಧರ್ಮಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳನ್ನು ಮುಂದೆ ಪಟ್ಟಿಮಾಡಲಾಗಿದೆ.
ಲೀನಕಾರಿಅಭಿಮಾನಿ ಕಲಿಲಗಳು	ಲೀನಕಾರಿ ದ್ವೇಷಿ ಕಲಿಲಗಳು	
೧. 	ತಯಾರಿಸುವುದು ಸುಲಭ. ಸ್ವಯಂ 	ತಯಾರಿಸುವುದು ಕಷ್ಟ. ಸ್ಥಿರವಾಗಿರಲು 
	ಸ್ಥಿರ ಕಲಿಲಗಳಿವು. ಸ್ಥಿರತೆಗೆ ಎಲೆಕ್ಟ್ರೊ	ಲೇಶ ಮಾತ್ರವಾದರೂ 
	ಲೈಟುಗಳ ಅಗತ್ಯವಿಲ್ಲ.	ಎಲೆಕ್ಟ್ರೊಲೈಟುಗಳಿರಬೇಕು.	
೨. 	ಅಲ್ಪ ಪ್ರಮಾಣ ಎಲೆಕ್ಟ್ರೊಲೈಟುಗಳ 	ಕೊಂಚ ಎಲೆಕ್ಟ್ರೊಲೈಟೂ 
	ಸಂಪರ್ಕದಲ್ಲಿ ಗರಣೆಗಟ್ಟುವುದಿಲ್ಲ. 	ಗರಣೆಗಟ್ಟಿಸಬಲ್ಲುದು.	
೩. 	ಕಣಗಳು ಅನೇಕ ಲೀನಕಾರಿಯ 	ಕಣಗಳೊಡನೆ ಕೂಡಿರುವ ಲೀನಕಾರಿಯ 
	ಅಣುಗಳೊಡನೆ ಕೂಡಿರುತ್ತವೆ.	ಅಣುಗಳ ಸಂಖ್ಯೆ ಬಲು ಕಡಿಮೆ.
೪. 	ವಿಪರ್ಯಯಸ್ಥ ವಸ್ತುಗಳು, ಅಂದರೆ 	ವಿಪರ್ಯಯಗೊಳಿಸಲಾಗದು, 	
	ಮಾಧ್ಯಮದ ಸಂಪರ್ಕದಲ್ಲಿ ಕಲಿಲ	ಕಲಿಲ ದ್ರಾವಣವನ್ನು ಇಂಗಿಸಿದರೆ  
	ಹೊಂದುವುವು. ದ್ರಾವಣವನ್ನು 	ವಿಲಂಬಿತ ವಸ್ತು ದ್ರಾವಣವನ್ನು 
	ಹಿಂಗಿಸಿದರೆ ವಿಲಂಬಿತ ವಸ್ತು ಪ್ರಾಪ್ತ 	ಇಂಗಿಸಿದರೆ ವಿಲಂಬಿತ ವಸ್ತು 
	ಸ್ಥಿತಿ ವಾಗುವುದು. ಹೀಗೆ ಎಷ್ಟು 	ಬೇರ್ಪಡುವುದು. ಆದರೆ ಪುನಃ 	
	ಸಾರಿಯಾದರೂ ಪುನರಾವರ್ತಿಸ 	ಮಾಧ್ಯಮಕ್ಕೆ ಸೇರಿಸಿದರೆ ಕಲಿಲ 
	ಬಹುದು.	ಆಗುವುದಿಲ್ಲ. 
೫.	ಮಾಧ್ಯಮಕ್ಕಿಂತ ಮೇಲ್ಮೈ ಒತ್ತಡ 	ಮೇಲ್ಮೈ ಒತ್ತಡ ಮತ್ತು ಸ್ನಿಗ್ಧತೆ 
	ಕಡಿಮೆಯಾಗಿಯೂ ಸ್ನಿಗ್ಧತೆ ಹೆಚ್ಚಾಗಿಯೂ	ಮಾಧ್ಯಮದಷ್ಟೇ ಇರುತ್ತದೆ.
	ಇರುವುದು. 		
೬. ಮಾಧ್ಯಮದ ಠಿಊ ಮೌಲ್ಯಕ್ಕೆ ಅನುಗುಣವಾಗಿ 	ಸಮ ವಿದ್ಯುತ್ ಬಿಂದು ಎಂಬುದಿಲ್ಲ.	
	ಕಣಗಳು ಧನ ಅಥವಾ ಋಣ  
	ವಿದ್ಯುದಂಶ ಹೊಂದಿರಬಹುದು. 
	ಅಥವಾ ವಿದ್ಯುದ್ರಹಿತವಾಗಿರಬಹುದು.	
೭.	ಎಲೆಕ್ಟ್ರೊಫಾರಿಸಿಸ್ ಪ್ರದರ್ಶಿಸಲೇಬೇಕೆಂಬ 	ಎಲೆಕ್ಟ್ರೊಫಾರಿಸಿಸ್ ಪ್ರದರ್ಶಿಸುವುವು.
	ನಿಯಮವಿಲ್ಲ.	
೮.	ದಟ್ಟದ್ರಾವಣಗಳನ್ನು ತಯಾರಿಸಲು ಸಾಧ್ಯ 	ಮಾಧ್ಯಮದಲ್ಲಿ ಕಲಿಲಸ್ಥಿತಿಯಲ್ಲಿ 
	ಅಂದರೆ ಮಾಧ್ಯಮದಲ್ಲಿ ಅಧಿಕಪ್ರಮಾಣ  	ವಿಲಂಬಿಸಬಹುದಾದ ವಸ್ತುವಿನ ಗರಿಷ್ಠ 
	ವಸ್ತುವನ್ನು ವಿಲಂಬಿಸಬಹುದು.	ಪ್ರಮಾಣ ಕಡಿಮೆ.	
೯.	ಅತಿಸೂಕ್ಷ್ಮದರ್ಶಕದಿಂದ ನೋಡಿದಾಗ 	ಅತಿಸೂಕ್ಷ್ಮದರ್ಶಕದ ಅಡಿಯಲ್ಲಿ ಕಲಿಲ 
	ಚೆದರಿದ ಕಣಗಳು ಸ್ಪಷ್ಟವಾಗಿ 	ಕಣಗಳು ಎದ್ದು ಕಾಣುತ್ತವೆ.
	ಕಾಣುವುದಿಲ್ಲ. ಮಾಧ್ಯಮ ಮತ್ತು 
	ಚೆದರಿದ ವಸ್ತುಗಳ ಸಾಂದ್ರತೆ ಮತ್ತು 
	ವಕ್ರೀಭವನಾಂಕಗಳಲ್ಲಿ ಅಲ್ಪ 
	ಅಂತರವಿರುವುದರಿಂದ ಹೀಗಾಗುತ್ತದೆ.
		
ಕಲಿಲ ವಿಜ್ಞಾನದ ಪ್ರಯೋಜನ : ನಿತ್ಯಜೀವನದಲ್ಲಿ, ಕೈಗಾರಿಕೆಯಲ್ಲಿ ಮತ್ತು ವೈದ್ಯವಿಜ್ಞಾನದಲ್ಲಿ ಕಲಿಲಗಳು ಮಹತ್ತರ ಸೇವೆ ಸಲ್ಲಿಸುತ್ತಿವೆ. ಔಷಧ, ಟಾನಿಕ್ಕು ಮೊದಲಾದವುಗಳೆಲ್ಲ ಸಾಮಾನ್ಯವಾಗಿ ಕಲಿಲಗಳು. ಈ ಸ್ಥಿತಿಯಲ್ಲಿ ಅವು ಬಹುಬೇಕ ದೇಹಗತವಾಗಿ ನಿಯೋಜಿತ ಗುಣ ನೀಡುವುವು. ಕ್ಷಯ, ಮಿದುಮೂಳೆ ರೋಗ ಮುಂತಾದವುಗಳು ಪ್ರಾಪ್ತವಾದಾಗ ದೇಹಶಕ್ತಿಯನ್ನು ಹೆಚ್ಚಿಸಲು ಚಿನ್ನ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಕಲಿಲಗಳ ಚುಚ್ಚುಮದ್ದನ್ನು ನೀಡುವುದು ಪದ್ಧತಿ. ಗಂಧಕದ ಕಲಿಲವನ್ನು ಕ್ರಿಮಿನಾಶಕವಾಗಿ, ಆಂಟಿಮೊನಿ ಕಲಿಲವನ್ನು ಕಾಳಜ್ವರದ ಚಿಕಿತ್ಸೆಗೆ ಮತ್ತು ಆರ್ಜಿರಾಲ್ ಎಂಬ ಬೆಳ್ಳಿಯ ಕಲಿಲವನ್ನು ಕಣ್ಣಿನ ಬೇನೆಯಲ್ಲಿ ಬಳಸುವುದನ್ನು ನೆನೆಯಬಹುದು. 
ಗರಣೆಕಟ್ಟುವ ಕ್ರಿಯೆಗೇ ನಿರ್ದಿಷ್ಟ ಉಪಯೋಗಗಳುಂಟು. ಕುಡಿಯುವ ನೀರಿನಲ್ಲಿರುವ ವಿಲಂಬಿತ ಕಶ್ಮಲಗಳು ಕಲಿಲಗಳು. ಅದಕ್ಕೆ ಅಗತ್ಯ ಪ್ರಮಾಣದಲ್ಲಿ ಪಟಿಕವನ್ನು ಸೇರಿಸಿದರೆ ಅದರಲ್ಲಿರುವ ತ್ರಿವೇಲೆನ್ಸೀಯ ಅಲ್ಯೂಮಿನಿಯಂ ಅಯಾನು (ಂಟ೩+) ಪರಿಣಾಮಕಾರಿಯಾಗಿ ಕಶ್ಮಲಗಳನ್ನು ತಳವೂರಿಸುವುದು. ನಮ್ಮ ಮೈಮೇಲೆ ಗಾಯವಾದಾಗ ರಕ್ತಸ್ರಾವವಾಗುವುದಷ್ಟೆ. ಅದನ್ನು ತಡೆಗಟ್ಟಲು ಪಟಿಕ ಅಥವಾ ಫೆರಿಕ್ ಕ್ಲೋರೈಡಿನ ದ್ರಾವಣಗಳನ್ನು ಬಳಸುವುದು ವಾಡಿಕೆ. ಈ ರಕ್ತಸ್ರಾವವಿರೋಧಿಗಳಲ್ಲಿರುವ ಅಲ್ಯೂಮಿನಿಯಂ (ಂಟ೩+) ಮತ್ತು ಫೆರಿಕ್ (ಈಟ೩+) ಅಯಾನುಗಳು ರಕ್ತದಲ್ಲಿರುವ ಕಲಿಲ ವಸ್ತುವನ್ನು ಹೆಪ್ಪುಗೊಳಿಸುವುವು. ಒತ್ತರಿಸಿದ ವಸ್ತು ಗಾಸಿಗೊಂಡ ರಕ್ತನಾಳದ ಬಿರುಕನ್ನು ಮುಚ್ಚಿ ರಕ್ತ ಹರಿಯುವುದನ್ನು ನಿಲ್ಲಿಸುತ್ತದೆ. ಕೃತಕಮಳೆಯನ್ನು ಬರಿಸುವುದು ಈ ತತ್ತ್ವವನ್ನು ಅನುಸರಿಸಿಯೇ. ಮೋಡಗಳಲ್ಲಿ ಕಲಿಲ ಸ್ಥಿತಿಯಲ್ಲಿರುವ ನೀರಿನ ಹನಿಗಳು ಇರುತ್ತವೆ. ವಿಮಾನದಲ್ಲಿ ಮೇಲೇರಿ ಮೋಡಗಳ ಮೇಲೆ ವಿದ್ಯುತ್ಪೂರಿತ ಮರಳನ್ನಾಗಲೀ ಅಥವಾ ಸಿಲ್ವರ್ ಅಯೊಡೈಡಿನ ಕಲಿಲವನ್ನಾಗಲೀ ಎರಚಿದರೆ ನೀರಿನ ಹನಿಗಳು ಒಟ್ಟುಗೂಡಿ ಗುರುತ್ವಾಕರ್ಷಣೆಗೆ ಒಳಪಟ್ಟು ಮಳೆಯಾಗಿ ಉದುರುವುವು. ಈ ತಂತ್ರ ಬಳಸಿ ಮರುಭೂಮಿಗಳನ್ನು ಫಲವತ್ತಾಗಿಸುವ ಯತ್ನಗಳು ನಡೆಯುತ್ತಿವೆ. ರಬ್ಬರ್ ಗಿಡಕ್ಕೆ ಕಚ್ಚುಮಾಡಿದಾಗ ಹಾಲಿನಂಥ ದ್ರವ ಹೊರ ಬೀಳುತ್ತದೆ. ಇದು ಕಲಿಲ. ಇದನ್ನು ಕುದಿಸಿ ಗರಣೆಗಟ್ಟಿಸಿದ ಹೊರತು ವಲ್ಕನೈಸ್ ಮಾಡಲು ಸಾಧ್ಯವಿಲ್ಲ. ಚರ್ಮವನ್ನು ಹದಗೊಳಿಸುವ ಉದ್ಯಮದಲ್ಲಿ ಹೆಪ್ಪುಗಟ್ಟಿಸುವ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಚರ್ಮದಲ್ಲಿ ಧನ ವಿದ್ಯುತ್ ಹೊತ್ತ ಸಸಾರಜನಕ ಕಲಿಲಗಳು ಜೆಲ್ ಸ್ಥಿತಿಯಲ್ಲಿರುತ್ತವೆ. ತೊಗಲನ್ನು ಟ್ಯಾನಿನ್ ದ್ರಾವಣದಲ್ಲಿ ನೆನೆಹಾಕಿದಾಗ ಅದು ಋಣ ಕಲಿಲವಾದ್ದರಿಂದ ಪರಸ್ಪರ ಗರಣೆಗಟ್ಟಿಸಿ ತೊಗಲು ಗಡುಸಾಗುವುದು. ಈ ಸ್ಥಿತಿಯಲ್ಲಿ ಚರ್ಮ ಕೊಳೆಯುವ ಸಂಭವ ಕಡಿಮೆ. ಇದಕ್ಕಾಗಿ ಕ್ರೋಮ್ ಆಲಂನಂಥ ಲವಣಗಳನ್ನೂ ಉಪಯೋಗಿಸುವುದುಂಟು.
ಎಲೆಕ್ಟ್ರೊಫಾರಿಸಿಸ್ ವಿಧಾನದ ಬಳಕೆಗೆ ಎರಡು ಮುಖ್ಯ ನಿದರ್ಶನಗಳಿವೆ. ನಗರ ಪ್ರದೇಶಗಳಲ್ಲಿರುವ ಅನೇಕ ಸವಲತ್ತುಗಳ ದೆಸೆಯಿಂದ ಕೈಗಾರಿಕೆಗಳು ಅಲ್ಲೇ ಕೇಂದ್ರೀಕೃತವಾಗುತ್ತಲಿವೆ. ಅವುಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ವಿಸರ್ಜಿಸುವ ಅಗಾಧ ಪ್ರಮಾಣದ ಹೊಗೆ ನಗರದ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಹೊಗೆಯಲ್ಲಿರುವ ಇಂಗಾಲದ ಕಲಿಲ ಕಣಗಳು ಜನಸಾಮಾನ್ಯರ ಶ್ವಾಸಕೋಶಗಳನ್ನು ಹೊಕ್ಕು ಅಲ್ಲೇ ಉಳಿದು ಕ್ಷಯ, ಏಡಿಗಂತಿ ಇತ್ಯಾದಿ ರೋಗರುಜಿನಗಳನ್ನು ಉಂಟುಮಾಡುತ್ತವೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂಥ ಧೂಮದಿಂದ ಕಲಿಲ ವಸ್ತುಗಳನ್ನು ನಿವಾರಿಸದೆ ವಿಧಿಯಿಲ್ಲ. ಇದರ ಸಲುವಾಗಿಯೇ ಆಧುನಿಕ ಕಾರ್ಖಾನೆಗಳ ಹೊಗೆಯ ಗೂಡುಗಳಲ್ಲಿ ಕಾಟ್ರೆಲ್ ಒತ್ತಾರಕಾರಕಗಳನ್ನು ಜೋಡಿಸಿರುತ್ತಾರೆ. ಅದರ ಕ್ರಿಯಾವಿಧಾನ ಚಿತ್ರರಿಂದ ಸ್ವಯಂವೇದ್ಯವಾಗುವುದು.
ಎರಡನೆಯದು ಗ್ರಾಮಸಾರನ ಎನಿಯೋಗದ ಸಮಸ್ಯೆ. ಅದರಲ್ಲಿ ಸಸಾರಜನಕ ಪದಾರ್ಥಗಳು ಹೇರಳವಾಗಿರುವುದರಿಂದ ಅದು ಗೊಬ್ಬರವಾಗಿ ಬಳಸಲು ಯೋಗ್ಯವಾಗಿದೆ. ಇದಕ್ಕಾಗಿ ಕಲಿಲ ವಸ್ತುಗಳಿಂದ ಕೂಡಿದ ಗ್ರಾಮಸಾರವನ್ನು ಬೃಹದಾಕಾರದ ತೊಟ್ಟಿಗಳಲ್ಲಿ ನಗರಕ್ಕೆ ಬಹು ದೂರದಲ್ಲಿ ಸಂಗ್ರಹಿಸಲಾಗುವುದು. ಅವುಗಳಲ್ಲಿ ಲೋಹದ ದ್ರುವಗಳನ್ನಿಟ್ಟು ವಿದ್ಯುದ್ವಿಭಜನೆ ಮಾಡಿದಾಗ ಸಸಾರಜನಕ ಕಲಿಲಗಳು ವಿರುದ್ಧ ಧ್ರುವಗಳ ಬಳಿಸಾರಿ ಹೆಪ್ಪುಗಟ್ಟುವುವು. ಹೀಗೆ ಒತ್ತರಿಸಿದ ವಸ್ತುವನ್ನು ಗೊಬ್ಬರವಾಗಿಯೂ ಉಳಿದ ನೀರನ್ನು ವ್ಯಾಪಕ ವ್ಯವಸಾಯಕ್ಕೂ ಉಪಯೋಗಿಸುವರು. ರಕ್ಷಣಾ ಕಲಿಲಗಳಿಗೂ ಪ್ರಾಮುಖ್ಯವಿದೆ. ಸಸ್ಯರಕ್ಷಣೆಗೆ ಉಪಯೋಗಿಸುವ ಕೀಟನಾಶಕಗಳನ್ನು ಸಾಮಾನ್ಯವಾಗಿ ಕಲಿಲಸ್ಥಿತಿಯಲ್ಲೇ ಪ್ರಯೋಗಿಸುವುದು ವಾಡಿಕೆ. ಅವುಗಳೊಡನೆ ಸಾಬೂನು ಸೇರಿದರೆ ಮಾತ್ರ ಅವು ದೀರ್ಘಕಾಲ ವಿಲಂಬಿತ ಸ್ಥಿತಿಯಲ್ಲೇ ಉಳಿದು ಕೀಟಗಳಿಗೆ ಮಾರಕವಾಗಬಲ್ಲವು. ಐಸ್ ಕ್ರೀಂ ಸಹ ಒಂದು ಕಲಿಲ. ಇದಕ್ಕೆ ಜಿಲೆಟಿನ್ ಕೂಡಿಸಿ ರಕ್ಷಿಸಿಡಬೇಕು. ಇಲ್ಲದಿದ್ದರೆ ಲ್ಯಾಕ್ಟೋಸ್ ಸಕ್ಕರೆಯ ಮತ್ತು ಮಂಜಿನ ಹರಳುಗಳು ಉತ್ಪತ್ತಿಯಾಗಿ ಐಸ್ ಕ್ರೀಮನ್ನು ಜಗಿದು ತಿನ್ನಬೇಕಾಗುವ ಅಹಿತ ಪ್ರಸಂಗ ಉಂಟಾಗುತ್ತದೆ. ಎಲ್ಲ ಮಸಿಗಳೂ ಕಲಿಲಗಳು. ಉತ್ತಮದರ್ಜೆಯ ಶಾಯಿಗಳಿಗೆ ರಕ್ಷಣಾ ಕಲಿಲಗಳನ್ನು ಬೆರೆಸಿರುವುದರಿಂದ ಅವು ಹೆಪ್ಪುಗಟ್ಟದೆ ಫೌಂಟನ್ ಪೆನ್ನು ನಿರಾತಂಕವಾಗಿ ಬರೆಯಲು ಸಾಧ್ಯ. ಮಿದುಳು ಬಳ್ಳಿಯ ದ್ರವವೂ ಕಲಿಲವಸ್ತು. ಆರೋಗ್ಯವಂತರಾದವರಲ್ಲಿ ಅದಕ್ಕೆ ನಿರ್ದಿಷ್ಟ ಸುವರ್ಣಾಂಕವಿರುತ್ತದೆ. ಹುಚ್ಚು, ಹಿಸ್ಟೀರಿಯಾ, ಮೆನಿಂಜೈಟಿಸ್ (ಮಿದುಳುಬಳ್ಳಿಯ ಪೊರೆಗಳ ಉರಿಯೂತ) ಮುಂತಾದ ಮಿದುಳಿಗೆ ಸಂಬಂಧಿಸಿದ ರೋಗಗಳು ಸನ್ನಿಹಿತವಾದಾಗ ಮಿದುಳುಬಳ್ಳಿಯ ದ್ರವದ ಸುವರ್ಣಾಂಕ ಗಣನೀಯವಾಗಿ ವ್ಯತ್ಯಾಸವಾಗಿರುವುದು. ಇದನ್ನು ಗಮನಿಸಿ ಇಂಥ ರೋಗ ಇಂತಿಷ್ಟು ದಿನಗಳಲ್ಲಿ ಪ್ರಾಪ್ತವಾಗುವುದೆಂಬುದನ್ನು ಊಹಿಸಿ ಯೋಗ್ಯ ಔಷಧೋಪಚಾರವನ್ನು ಕೈಗೊಳ್ಳಬಹುದು. 
ಫಲವತ್ತಾದ ಮಣ್ಣು ಕಲಿಲಸ್ಥಿತಿಯಲ್ಲಿರುತ್ತದೆ. ಪ್ರಾಣಿಗಳ ಮಲ ಕೊಳೆತು ಅದು ರಕ್ಷಣಾ ಕಲಿಲವಾಗಿ ವರ್ತಿಸುವುದು. ಈ ಸ್ಥಿತಿಯಲ್ಲಿ ಮಣ್ಣು ತೇವ ಮತ್ತು ಪೋಷಣಾಂಶಗಳನ್ನು ಸರಾಗವಾಗಿ ಹೀರಿಕೊಳ್ಳಬಲ್ಲುದು. ಪೇಯಿಂಟುಗಳು, ಸಿಮೆಂಟ್, ಸಂಯೋಜಿತ ಪ್ಲಾಸ್ಟಿಕ್ಕುಗಳು, ಗ್ರಾಫೈಟಿನಿಂದಾದ ಕೀಲೆಣ್ಣೆಗಳು, ಬ್ರೆಡ್ಡು, ಬೆಣ್ಣೆ, ಮೊಸರು ಮೊದಲಾದವುಗಳೆಲ್ಲ ಕಲಿಲಗಳು. ಹೀಗೆ ವಿಶ್ವವ್ಯಾಪಿಯಾದ ಕಲಿಲಗಳ ಪ್ರಯೋಜನ ಇಷ್ಟುಮಾತ್ರವೆಂದು ಹೇಳಲು ಬಾರದು. 	(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ